13 ವರ್ಷಗಳಾದ್ರೂ ಕಪ್ ಗೆಲ್ಲದ ಆರ್‌ಸಿಬಿ – ಕಾರಣ ಬಿಚ್ಚಿಟ್ಟ ಡರೇನ್ ಸ್ಯಾಮಿ

Public TV
2 Min Read

ಅಬುಧಾಬಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೈಫಲ್ಯ ಅನುಭವಿಸಿದ್ದು, 2020ರ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿದೆ. ಆರ್‌ಸಿಬಿ ತಂಡ ಐಪಿಎಲ್ ಆರಂಭವಾಗಿ 13 ವರ್ಷಗಳು ಕಳೆದರೂ ಕಪ್ ಗೆಲ್ಲದ ಹಿಂದಿನ ಕಾರಣವನ್ನು ವೆಸ್ಟ್ ಇಂಡೀಸ್ ಆಟಗಾರ ಡರೇನ್ ಸ್ಯಾಮಿ ಬಿಚ್ಚಿಟ್ಟಿದ್ದಾರೆ.

ಬಹುವರ್ಷಗಳ ಬಳಿಕ ಆರ್‌ಸಿಬಿ ಪ್ಲೇ ಆಫ್‍ಗೆ ಪ್ರವೇಶ ಪಡೆದರೂ ಬೆಂಗಳೂರು ಆಟಗಾರರ ಕಪ್ ಗೆಲ್ಲುವ ಕನಸು ಈಡೇರಲಿಲ್ಲ. ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‍ರೈಸರ್ಸ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನಿರಸ ಪ್ರದರ್ಶನ ತೋರಿದ ಆರ್‌ಸಿಬಿ ಸೋಲುಂಡಿತ್ತು.

ಐಪಿಎಲ್ ಟೂರ್ನಿಗಳಲ್ಲಿ ಬೆಂಗಳೂರು ತಂಡ ಪ್ರದರ್ಶನವನ್ನು ಗಮನಿಸಿದರೆ ತಂಡದ ಬೌಲಿಂಗ್ ಪಡೆಯೇ ಹೆಚ್ಚು ಸಮಸ್ಯೆಯಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಡರೇನ್ ಸ್ಯಾಮಿ, ಬ್ಯಾಟ್ಸ್ ಮನ್‍ಗಳು ಪಂದ್ಯಗಳನ್ನು ಗೆಲ್ಲಿಸಿ ಕೊಡುತ್ತಾರೆ. ಆದರೆ ಬೌಲಿಂಗ್ ಪಡೆ ಟೂರ್ನಿಯನ್ನೇ ಗೆಲ್ಲಿಸುತ್ತದೆ. ಇದು ಬದಲಾವಣೆಯಾಗದ ಹೊರತು ಕಪ್ ಗೆಲ್ಲಲು ಆಗಲ್ಲ ಎಂದು ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಆರ್‌ಸಿಬಿ ಬೌಲಿಂಗ್ ಪ್ರದರ್ಶನವನ್ನು ಗಮನಿಸುವುದಾದರೆ, ಯಜುವೇಂದ್ರ ಚಹಲ್ ಮಾತ್ರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಪ್ರತಿ ಪಂದ್ಯದಲ್ಲೂ ತಂಡಕ್ಕಾಗಿ ವಿಕೆಟ್ ಪಡೆದ ಚಹಲ್, ಆವೃತ್ತಿಯ ಟಾಪ್ ವಿಕೆಟ್ ಕಿತ್ತ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದಿದ್ದಾರೆ. ಚಹಲ್ 15 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ್ದಾರೆ. ಉಳಿದಂತೆ ಬೇರೆ ಯಾವುದೇ ಬೌಲರ್ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಯುವ ವೇಗಿ ನವದೀಪ್ ಸೈನಿ ಕೂಡ ನಿರಾಸೆ ಮೂಡಿಸಿದ್ದಾರೆ.

ಸತತ ನಾಲ್ಕು ಪಂದ್ಯ ಸೋತರೂ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ನಿರ್ಣಾಯಕ ಪಂದ್ಯದಲ್ಲಿಯೂ ಸೋತು ಟೂರ್ನಿಯಿಂದ ಹೊರ ನಡೆದಿದೆ. ನಿನ್ನೆಯ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಸುಲಭದ ಗುರಿ ಬೆನ್ನತ್ತಿದ್ದ ಸನ್‍ರೈಸರ್ಸ್ ಕೇನ್ ವಿಲಿಯಮ್ಸನ್‍ರ ಅರ್ಧ ಶತಕ ನೆರವಿನಿಂದ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಗೆಲುವು ಪಡೆಯಿತು. ಆ ಮೂಲಕ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಭಾನುವಾರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಡೆಲ್ಲಿ ಮತ್ತು ಸನ್‍ರೈಸರ್ಸ್ ನಡುವೆ ಹಣಾಹಣಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *