ನವದೆಹಲಿ: ಅಶೀಫಾಳ ನಂತರದ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, 12 ವರ್ಷದ ಅಪ್ರಾಪ್ತೆಯ ಮೇಲೆ ನೆರೆಮನೆಯವನೇ ಆತ್ಯಾಚಾರ ಎಸಗಿರುವ ಘಟನೆ ದೆಹಲಿಯ ರೋಹಿನಿ ಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತೆಯ ಪೋಷಕರು ತಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿರುವುದನ್ನು ವಾಟ್ಸಪ್‍ನಲ್ಲಿ ಬಂದ ವಿಡಿಯೋವನ್ನು ನೋಡಿ ತಿಳಿದಿದ್ದು, ನಂತರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿದಂತೆ ಮೂವರನ್ನು ಬಂಧಿಸಿದ್ದಾರೆ.
ಘಟನೆಯ ವಿವರ?:
ಆರೋಪಿಯನ್ನು ನೆರೆಮನೆಯ ಬಂಟಿ ಎಂದು ಗುರುತಿಸಲಾಗಿದೆ. ಈತ ಸೋಮವಾರ ಮಾನಸಿಕ ಅಸ್ವಸ್ಥ ಬಾಲಕಿಯನ್ನು ಪುಸಲಾಯಿಸಿ ಮಂಗೊಲ್ಪುರ್ ಕಲಾನ್ ಪ್ರದೇಶದಲ್ಲಿರುವ ಸಮುದಾಯ ಭವನಕ್ಕೆ ಕರೆದೊಯ್ದಿದ್ದಾನೆ. ನಂತರ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ನೀಚ ಕೃತ್ಯವನ್ನು ಆರೋಪಿಯ ಇಬ್ಬರು ಸ್ನೇಹಿತರು ತಮ್ಮ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಆರೋಪಿಗಳು ಈ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಸಂತ್ರಸ್ತೆ ಈ ಬಗ್ಗೆ ಯಾರಿಗೂ ತಿಳಿಸಲಿಲ್ಲ. ಆದರೆ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆದ ನಂತರ ಸಂತ್ರಸ್ತೆಯ ಕುಟುಂಬದವರು ವಾಟ್ಸಪ್‍ನಲ್ಲಿ ಮಗಳ ಮೇಲಿನ ಅತ್ಯಾಚಾರದ ವಿಡಿಯೋ ನೋಡಿ ಆಘಾತಗೊಂಡಿದ್ದಾರೆ. ನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯಕ್ಕೆ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಐಪಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.