ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರಿಗೆ ಪಾಸ್ಮಾ ಚಿಕಿತ್ಸೆ – ಇಂದು ಒಂದೇ ದಿನ 12 ಕೊರೊನಾ ಪ್ರಕರಣ ಪತ್ತೆ

Public TV
3 Min Read

ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಂದು ಒಂದೇ ದಿನ 12 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇ 8ರ ಬೆಳಗ್ಗೆಯ ಹೆಲ್ತ್ ಬುಲೆಟಿನ್ ಪ್ರಕಟಣೆ ಪ್ರಕಾರ ಭಟ್ಕಳ ಪಟ್ಟಣದಲ್ಲಿಯೇ 12 ಪ್ರಕರಣಗಳು ದೃಢಪಟ್ಟಿದೆ. ಈ 12 ಮಂದಿಗೆ ಮೇ 6ಕ್ಕೆ ಸೋಂಕು ಪತ್ತೆಯಾದ ಯುವತಿ ರೋಗಿ-659 ಅವರ ಸಂಪರ್ಕದಿಂದ ಕೊರೊನಾ ತಗುಲಿದೆ. ಈ ಪೈಕಿ 10 ಮಂದಿ ಯುವತಿಯ ಕುಟುಂಬದವರಾಗಿದ್ದಾರೆ. ಉಳಿದಂತೆ ಓರ್ವ ಸ್ನೇಹಿತೆ ಮತ್ತು ಇನ್ನೊಬ್ಬರು ಪಕ್ಕದ ಮನೆಯವರಾಗಿದ್ದಾರೆ ಎಂದು ತಿಳಿಸಿದರು.

ಸೋಂಕಿನ ಮೂಲ ಪತ್ತೆಯಾಗಿದ್ದರಿಂದ ಸಮುದಾಯಕ್ಕೆ ಹರಡಿಲ್ಲ ಎಂಬುದು ಖಚಿತವಾಗಿದೆ. ಕೋವಿಡ್-19 ಸೋಂಕು ಈವರೆಗೆ ಜಿಲ್ಲೆಯ ಕಂಟೈನ್‍ಮೆಂಟ್ ಪ್ರದೇಶವಾದ ಭಟ್ಕಳದಲ್ಲಿದ್ದು, ಉಳಿದ ಪ್ರದೇಶಗಳ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಭಟ್ಕಳ ನಗರದಿಂದ ಮೂರು ಕುಟುಂಬಗಳು ಮಂಗಳೂರಿನ ನ್ಯೂರೋ ಆಸ್ಪತ್ರೆಗೆ ಆರೋಗ್ಯ ಚಿಕಿತ್ಸೆಗೆ ಹೋಗಿ ಬಂದಿವೆ ಎಂಬ ಮಾಹಿತಿ ದೊರೆತಿದೆ ಎಂದರು.

ಹೀಗಾಗಿ ಜಿಲ್ಲೆಯ ಜನರು ಚಿಕಿತ್ಸೆಗೆ ಮಂಗಳೂರಿನ ನ್ಯೂರೋ ಆಸ್ಪತ್ರೆಗೆ ಹೋಗಿ ಬಂದಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಮತ್ತು ಜ್ವರ, ಕೆಮ್ಮು ಇದ್ದರೆ ಸ್ವಯಂ ಚಿಕಿತ್ಸೆಗೆ ಮುಂದಾಗದೇ ವೈದ್ಯರ ಸಲಹೆ ಪಡೆಯಬೇಕು ಎಂದು ಸೂಚಿಸಿದರು.

ಭಟ್ಕಳ ಹೊರತುಪಡಿಸಿ ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಯಥಾವತ್ತಾಗಿ ಅನುಸರಿಸಬೇಕು. ವಿದೇಶ ಹಾಗೂ ಹೊರ ರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವವರನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಕ್ವಾರಂಟೈನ್ ಮಾಡಲಾಗುವುದು.

ಭಟ್ಕಳ ಕಂಟೈನ್‍ಮೆಂಟ್ ಪ್ರದೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಬಿಗಿಗೊಳಿಸಲಾಗುವುದು. ಮಾನವೀಯ ನೆಲೆಯಲ್ಲಿ ಹಿಂದೆ ನೀಡುತ್ತಿದ್ದ ಪಾಸ್ ಹಾಗೂ ಸಡಿಲಿಕೆಗಳು ಇನ್ನು ಮುಂದೆ ನೀಡಲಾಗುವುದಿಲ್ಲ. ಭಟ್ಕಳ ಸಂಪೂರ್ಣ ಸೀಲ್ ಮಾಡಲಾಗುತ್ತಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ಜೊತೆ ಯಾರೂ ಕೂಡ ಭಟ್ಕಳಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತದೆ. ಹಿಂದಿನ ನಿಯಮಕ್ಕಿಂತ ಕಠಿಣ ನಿಯಮ ಜಾರಿಮಾಡಲಾಗುತ್ತದೆ. ಇದಕ್ಕೆ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್ ಅವರು ಮಾತನಾಡಿ, ಸೋಂಕಿತರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್-19 ವಾರ್ಡಿಗೆ ಶಿಫ್ಟ್ ಮಾಡಲಾಗುತ್ತಿದೆ. ಅವರಿಗೆ ವೈದ್ಯಕೀಯ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಸಾರ್ವಜನಿಕರು ಆರೋಗ್ಯ ಸಮೀಕ್ಷೆಯಲ್ಲಿ ಭಾಗಿಯಾಗಿ ಮಾಹಿತಿ ನೀಡಬೇಕೆಂದರು.

ಸೋಂಕಿತರಿಗೆ ಪಾಸ್ಮಾ ಚಿಕಿತ್ಸೆ:
ಜಿಲ್ಲೆಯಲ್ಲಿ 24 ಮಂದಿ ಸೋಂಕಿತರಿದ್ದು, ಇದರಲ್ಲಿ 11 ಮಂದಿ ಗುಣಮುಖರಾಗಿದ್ದಾರೆ. ಇವರನ್ನು ಪ್ರತ್ತೇಕವಾಗಿಡಲಾಗಿದ್ದು, ಇವರ ಆರೋಗ್ಯ ಉತ್ತಮವಾಗಿದೆ. ಗುಣಮುಖರಾದವರ ರಕ್ತವನ್ನು ಪಡೆದು ಪ್ಲಾಸ್ಮ ಚಿಕಿತ್ಸೆ ಮೂಲಕ ಸೋಂಕಿತರ ಚಿಕಿತ್ಸೆ ನೀಡಲು ಐಸಿಎಮ್‍ಆರ್ ಅವರಿಗೆ ಅವಕಾಶ ಕೇಳಿ ಜಿಲ್ಲಾಡಳಿತ ಪತ್ರ ಬರೆದಿದ್ದು, ಅವರಿಂದ ಒಪ್ಪಿಗೆ ಬಂದ ನಂತರ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಎಂ. ರೋಷನ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಸೊಂಕಿತರ ವಿವರ:
1) ಮಾರ್ಚ್ 22ರಂದು ಮೊದಲ ಕೊರೊನಾ ಸೋಂಕಿತ ಪ್ರಕರಣ ವರದಿ, ರೋಗಿ-26 22ವರ್ಷದ ಯುವಕ.

2) ಮಾರ್ಚ್ 24 ರಂದು 2 ಪ್ರಕರಣ, ರೋಗಿ-35 40 ವರ್ಷದ ವ್ಯಕ್ತಿ ಹಾಗೂ ರೋಗಿ-36 65 ವರ್ಷದ ವೃದ್ಧ.

3) ಮಾರ್ಚ್ 28ರಂದು 5 ಪ್ರಕರಣ, ರೋಗಿ-62 22 ವರ್ಷದ ಯುವಕ, ರೋಗಿ-65 54 ವರ್ಷದ ಮಹಿಳೆ(ರೋಗಿ-36 ಅವರ ಪತ್ನಿ), ರೋಗಿ-66 28 ವರ್ಷದ ಯುವತಿ(ರೋಗಿ-36 ಜೊತೆ ಸಂಪರ್ಕ), ರೋಗಿ-67 23 ವರ್ಷದ ಯುವಕ(ರೋಗಿ-36 ಜೊತೆ ಸಂಪರ್ಕ), ರೋಗಿ-76 24 ವರ್ಷದ ಯುವಕ(ಸೋಂಕಿತ ರೋಗಿ-35 ಜೊತೆ ಸಂಪರ್ಕ).

4) ಮಾರ್ಚ್ 31ರಂದು ಒಂದು ಪ್ರಕರಣ, ರೋಗಿ-98 26 ವರ್ಷದ ಯುವಕ(ರೋಗಿ-62 ಜೊತೆ ಸಂಪರ್ಕ).

5) ಏಪ್ರಿಲ್ 8ರಂದು ಒಂದು ಪ್ರಕರಣ, ರೋಗಿ-176 26 ವರ್ಷದ ಗರ್ಭಿಣಿ ಮಹಿಳೆ(ಐಎಲ್‍ಐ ಪ್ರಕರಣ).

6) ಏಪ್ರಿಲ್ 14ರಂದು ಒಂದು ಪ್ರಕರಣ ರೋಗಿ-160 ಪುರುಷ(ರೋಗಿ-176 ಪತಿ).

7) ಮೇ 5ರಂದು ಒಂದು ಪ್ರಕರಣ, ರೋಗಿ-659 18 ವರ್ಷದ ಯುವತಿ.

8) ಮೇ 8ರಂದು 12 ಪ್ರಕರಣ, ಈ ಎಲ್ಲಾ ಸೋಂಕಿತರು ರೋಗಿ-659 ಅವರ ಸಂಪರ್ಕದಲ್ಲಿದ್ದರು. ರೋಗಿ-739, 25 ವರ್ಷದ ಮಹಿಳೆ. ರೋಗಿ-740, 18 ವರ್ಷದ ಯುವತಿ. ರೋಗಿ-741, 11 ವರ್ಷದ ಬಾಲಕಿ. ರೋಗಿ-742, 39 ವರ್ಷದ ಮಹಿಳೆ. ರೋಗಿ-743, 33 ವರ್ಷದ ವ್ಯಕ್ತಿ. ರೋಗಿ-744, 75 ವರ್ಷದ ವೃದ್ಧೆ. ರೋಗಿ-745, 12 ವರ್ಷದ ಬಾಲಕಿ. ರೋಗಿ-746, 83 ವರ್ಷದ ವೃದ್ಧ. ರೋಗಿ-747, 5 ತಿಂಗಳ ಹೆಣ್ಣು ಮಗು. ರೋಗಿ-748, 3 ವರ್ಷದ ಬಾಲಕಿ, ರೋಗಿ-749, 60 ವರ್ಷದ ವೃದ್ಧ ಹಾಗೂ ರೋಗಿ-750, 22 ವರ್ಷದ ಮಹಿಳೆ.

Share This Article
Leave a Comment

Leave a Reply

Your email address will not be published. Required fields are marked *