ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

Public TV
3 Min Read

ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜುಲೈ 1ರಿಂದ ಜಾರಿಗೆ ಬರಲಿದೆ. ಜಿಎಸ್‍ಟಿ ಜೊತೆ ಜುಲೈ 1ರಿಂದ ಇತರೇ ಕ್ಷೇತ್ರಗಳಲ್ಲೂ ಕೆಲ ಬದಲಾವಣೆಯಾಗಲಿದೆ. ಹೀಗಾಗಿ ಜುಲೈ 1ರಿಂದ ದೇಶದಲ್ಲಿ ಮತ್ತು ವಿಶ್ವದಲ್ಲಿ ಏನು ಬದಲಾವಣೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

1. ಐಟಿ ರಿಟರ್ನ್: ಜುಲೈ 1ರಿಂದ ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್) ಸಲ್ಲಿಸಲು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿದೆ. ಆಧಾರ್ ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.

2. ಪಾನ್ ಕಾರ್ಡ್: ಬೇರೆ ಬೇರೆ ಪಾನ್ ಕಾರ್ಡ್ ಬಳಸಿಕೊಂಡು ಜನರು ತೆರಿಗೆ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಈ ವಂಚನೆಯನ್ನು ತಡೆಗಟ್ಟಲು ಪಾನ್ ಕಾರ್ಡ್ ಗೂ ಆಧಾರ್ ಕಡ್ಡಾಯ ಮಾಡಲಾಗಿದೆ.

3. ಪಾನ್ ಸಿಗಲ್ಲ: ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಆಧಾರ್ ನಂಬರ್ ನೀಡಲೇಬೇಕು. ಜುಲೈ 1ರಿಂದ ಆಧಾರ್ ನೀಡದೇ ಇದ್ದರೆ ನಿಮಗೆ ಪಾನ್ ಸಿಗಲ್ಲ.

4. ಪಾಸ್ ಪೋರ್ಟ್ ಸಿಗಲ್ಲ: ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ಪಡೆಯಲು ಆಧಾರ್ ಕಡ್ಡಾಯ ಮಾಡಿದೆ. ಆಧಾರ್ ನಂಬರ್ ನೀಡದೇ ಇದ್ದರೆ ನಿಮಗೆ ಪಾಸ್ ಪೋರ್ಟ್ ಸಿಗಲ್ಲ

 

5. ಪಿಎಫ್: ಉದ್ಯೋಗಿಗಳ ಭವಿಷ್ಯ ನಿಧಿ ಸಂಘ(ಇಪಿಎಫ್‍ಓ) ಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಮಾಡಿದೆ. ಆಧಾರ್ ಲಿಂಕ್ ಮಾಡಿದ ಬಳಿಕ ಪಿಎಫ್ ಹಣವನ್ನು ತೆಗೆಯುವ ಸಮಯ 20 ದಿನಗಳಿಂದ 10 ದಿನಕ್ಕೆ ಇಳಿಕೆಯಾಗಿದೆ.

6. ರೈಲ್ವೇ ಟಿಕೆಟ್: ರೈಲ್ವೇ ಆನ್‍ಲೈನ್ ಮುಂಗಡ ಟಿಕೆಟ್ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಹೆಚ್ಚು ಟಿಕೆಟ್‍ಗಳನ್ನು ಒಟ್ಟಿಗೆ ಕಾಯ್ದಿರಿಸುವ ವೇಳೆ ನಡೆಯುವ ಮೋಸ, ನಕಲಿ ಗುರುತಿನ ಚೀಟಿ ಬಳಸಿ ಟಿಕೆಟ್ ಕಾಯ್ದಿರಿಸುವುದು ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಯಂತ್ರಣ ತರುವ ನಿಟ್ಟಿನಲ್ಲಿ ಕೇಂದ್ರ ಆಧಾರ್ ಕಡ್ಡಾಯ ಮಾಡಿದೆ.

7. ವಿದ್ಯಾರ್ಥಿವೇತನ: ಸರ್ಕಾರದಿಂದ ವಿತರಣೆಯಾಗುವ ವಿದ್ಯಾರ್ಥಿವೇತನವನ್ನು ಪಡೆಯುವ ವಿದ್ಯಾರ್ಥಿ ಕಡ್ಡಾಯವಾಗಿ ಆಧಾರ್ ಹೊಂದಿರಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಹಿಂದೆಯೇ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಜೂನ್ 30ರ ನಂತರ ಆಧಾರ್ ಇಲ್ಲದೇ ಇದ್ದರೆ ಯಾವೊಬ್ಬ ವಿದ್ಯಾರ್ಥಿಗೂ ಸ್ಕಾಲರ್‍ಶಿಪ್ ನೀಡದಂತೆ ಸೂಚಿಸಿದೆ.

8. ಪಿಡಿಎಸ್ ಸಿಗಲ್ಲ: ಸಾರ್ವಜನಿಕ ವಿತರಣಾ ವ್ಯವಸ್ಥೆಗೆ(ಪಿಡಿಎಸ್) ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಜುಲೈ 1ರ ಒಳಗಡೆ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಬೇಕೆಂದು ಈಗಾಗಲೇ ಸೂಚಿಸಲಾಗಿದೆ.

9. ಸಿಎಗೆ ಹೊಸ ಪಠ್ಯ: ಚಾರ್ಟರ್ಡ್ ಅಕೌಂಟೆಂಟ್ ಓದುವ ಮಂದಿಗೆ ಹೊಸ ಪಠ್ಯ ಜುಲೈ 1 ರಂದು ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಹೊಸ ಪಠ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಹೊಸ ಪಠ್ಯವು ಇಂಟರ್‍ನ್ಯಷನಲ್ ಫೆಡರೇಷನ್ ಆಫ್ ಅಕೌಂಟೆಂಟ್ಸ್ ಮಾನದಂಡಕ್ಕೆ ಅನುಗುಣವಾಗಿ ರೂಪುಗೊಂಡಿದ್ದು, ಹೊಸ ತೆರಿಗೆಯಾದ ಜಿಎಸ್‍ಟಿಯೂ ಬಗ್ಗೆ ಇರಲಿದೆ.

10. ಆನ್‍ಲೈನ್ ವೀಸಾ: ಭಾರತ ಪ್ರವಾಸಿಗರು ಜುಲೈ 1 ರಿಂದ ಆನ್‍ಲೈನ್ ಮೂಲಕ ಸಂದರ್ಶಕರ ವೀಸಾಗೆ(ವಿಸಿಟರ್ಸ್ ವೀಸಾ)ಅರ್ಜಿ ಸಲ್ಲಿಸಬಹುದು ಎಂದು ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಘೋಷಿಸಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ವೀಸಾ ಪಡೆಯುವ ಪ್ರಕ್ರಿಯೆ ಸುಲಭವಾಗಲಿದೆ.

11. ಸೌದಿ ಕುಟುಂಬ ತೆರಿಗೆ: ವಲಸಿಗರನ್ನು ನಿಯಂತ್ರಿಸುವ ಸಲುವಾಗಿ ಸೌದಿ ಸರ್ಕಾರ ದೇಶದಲ್ಲಿ ಕೆಲಸ ಮಾಡುತ್ತಿರುವ ಕುಟುಂಬಗಳ ಮೇಲೆ ವಿಶೇಷ ಕುಟುಂಬ ತೆರಿಗೆ ಹೇರಲು ಮುಂದಾಗಿದೆ. ಕುಟುಂಬ ತೆರಿಗೆಯಾಗಿ ಒಬ್ಬ ಸದಸ್ಯನ ಮೇಲೆ ಪ್ರತಿ ತಿಂಗಳು 100 ರಿಯಾಲ್(ಅಂದಾಜು 1700 ರೂ.) ವಿಧಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ.

 

Share This Article
Leave a Comment

Leave a Reply

Your email address will not be published. Required fields are marked *