ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ, 11 ಮಂದಿ ಸಾವು – ಮೃತರು ಯಾರು? ಇಲ್ಲಿದೆ ವಿವರ

Public TV
2 Min Read

ಬೆಂಗಳೂರು: ನಗರದ (Bengaluru) ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಆರ್‌ಸಿಬಿ (RCB) ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿದಲ್ಲಿ (Stampede) ಮೃತಪಟ್ಟ 11 ಜನರ ಮಾಹಿತಿ ಲಭ್ಯವಾಗಿದೆ.

ಕಾಲ್ತುಳಿತಕ್ಕೆ ಇಬ್ಬರು ವಿದ್ಯಾರ್ಥಿಗಳ ದುರಂತ ಅಂತ್ಯ
ಕನಕಶ್ರೀ ಲೇಔಟ್‌ನಲ್ಲಿ ವಾಸವಿದ್ದ 9 ನೇ ತರಗತಿ ವಿದ್ಯಾರ್ಥಿನಿ ದಿವ್ಯಾಂಶಿಕ ( 14) ಎಂಬಾಕೆ ಮೃತಪಟ್ಟಿದ್ದು, ಈಕೆ ಶಿವಕುಮಾರ್ , ಆಶ್ವಿನಿ ದಂಪತಿಯ ಪುತ್ರಿ ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ತಾಯಿ ಅಶ್ವಿನಿ , ಚಿಕ್ಕಮ್ಮ ರಚನಾ, ದಿವ್ಯಾಂಶ್ರೀ ಸೇರಿದಂತೆ 4 ಮಂದಿ ಸ್ಟೇಡಿಯಂ ಬಳಿ ಬಂದಿದ್ದರು. ಈ ವೇಳೆ ಕಾಲ್ತುಳಿತವಾಗಿ ದಿವ್ಯಾಂಶ್ರೀ ಸಾವನ್ನಪ್ಪಿದ್ದಳು. ಇದನ್ನೂ ಓದಿ: ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಸಿಎಂ ಘೋಷಣೆ

ಯಲಹಂಕ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಶಿವು (17) ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಈತ ಯಾದಗಿರಿ ಮೂಲದನಾಗಿದ್ದು, ಇವರ ಕುಟುಂಬ ಕಣ್ಣೂರಿನಲ್ಲಿ ವಾಸವಾಗಿತ್ತು. ಈತನ ತಂದೆ ತಾಯಿ ಇಬ್ಬರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಕಾಲ್ತುಳಿತಕ್ಕೆ ಬಲಿಯಾದ ಟೆಕ್ಕಿ
ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಟೆಕ್ಕಿ ದೇವಿ (25) ಎಂಬವರು ಸಾವನ್ನಪ್ಪಿದ್ದಾರೆ. ಮೂಲತಃ ತಮಿಳುನಾಡಿನ ನಿವಾಸಿಯಾಗಿದ್ದ ಅವರು, ಮಾರತ್ ಹಳ್ಳಿ ಬಳಿ ಪಿಜಿಯಲ್ಲಿ ವಾಸವಾಗಿದ್ದರು. ಇವರು ತಂದೆ ತಾಯಿಗೆ ಒಬ್ಬಳೇ ಮಗಳಾಗಿದ್ದರು. ತಂದೆ, ತಾಯಿ ಇಬ್ಬರಿಗೂ ವಯಸ್ಸಾಗಿದ್ದು ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ

ಕೋಲಾರದ ಇಂಜಿನಿಯರ್ ದುರ್ಮರಣ
ಬೆಂಗಳೂರಿನಲ್ಲಿ ಇಂಜಿನಿಯರ್‌ ಕೆಲಸ ಮಾಡುತ್ತಿದ್ದ ಕೋಲಾರದ ಯುವತಿ ಸಹನಾ (24) ಎಂಬಾಕೆ ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದಾರೆ. ಈಕೆ ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದವರಾಗಿದ್ದರು. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಶಿಕ್ಷಕ ದಂಪತಿಯಾದ ಸುರೇಶ ಬಾಬು ಮತ್ತು ಮಂಜುಳಾ ಅವರ ಪುತ್ರಿ ಎಂದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರದ ಪೂರ್ಣಚಂದ್ರ ಎಂಬವರು ಸಾವಿಗೀಡಾಗಿದ್ದಾರೆ. ಇವರು ಸಿವಿಲ್ ಇಂಜಿನಿಯರಿಂಗ್‌ ವ್ಯಾಸಾಂಗ ಮಾಡಿದ್ದರು. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಾಸನ ಜಿಲ್ಲೆಯ ಬೇಲೂರಿನ ಭೂಮಿಕ್ ಎಂಬಾತ ಸಹ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಇವರು ಬೆಂಗಳೂರಿನ 8ನೇ ಮೈಲಿಯ ಸೌಂದರ್ಯ ಕಾಲೇಜಿನ ಬಳಿ ವಾಸವಾಗಿದ್ದರು.

ಮಣಿಪಾಲ್ ಆಸ್ಪತ್ರೆಯಲ್ಲಿ ಚಿನ್ಮಯಿ (19) ಎಂಬಾತ ಸಾವನ್ನಪ್ಪಿದ್ದು, ಆರು ಜನರಿಗೆ ಚಿಕಿತ್ಸೆ ನಡೆಯುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ದಿಯಾ (26), ಶ್ರವಣ್ (21), ಮನೋಜ್ ಎಂಬವರು ಸಾವನ್ನಪ್ಪಿದ್ದಾರೆ. ಒಟ್ಟಾರೆ 11 ಜನ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೀಕರ ಕಾಲ್ತುಳಿತ – ರಾಷ್ಟ್ರಪತಿ, ರಾಹುಲ್‌ ಗಾಂಧಿ ಸೇರಿ ಗಣ್ಯರ ಸಂತಾಪ

Share This Article