ಗೆರಿಲ್ಲಾ ಆಪರೇಷನ್ ನಡೆದಿದ್ದು ಹೇಗೆ? ‘ದಳ’ಪತಿ ಸೂತ್ರಧಾರನಾಗಿದ್ದು ಹೇಗೆ?

Public TV
4 Min Read

ಬೆಂಗಳೂರು: ದೋಸ್ತಿ ಮಾಡಿ ದೇಶದಲ್ಲಿ ಮಹಾಮೈತ್ರಿಗೆ ಮುನ್ನುಡಿ ಬರೆದಿದ್ದ ಜೆಡಿಎಸ್, ಕಾಂಗ್ರೆಸ್ ಸರ್ಕಾರ ಪತನದ ಅಂಚಿಗೆ ಬಂದಿದೆ. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಎರಡು ಪಕ್ಷದ ಘಟಾನುಘಟಿ ನಾಯಕರು ರಾಜೀನಾಮೆ ಸಲ್ಲಿಸಿ ಹಿರಿಯ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.

ಹೌದು, ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅಸಮಾಧಾನ ಇತ್ತು. ಆದರೆ ಇಂದು ಮೂವರು ಜೆಡಿಎಸ್ ಶಾಸಕರು ಸರ್ಕಾರದ ಧೋರಣೆ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಗೆರಿಲ್ಲಾ ಆಪರೇಷನ್‍ನ ಚುಕ್ಕಾಣಿ ಹಿಡಿದಿದ್ದು ಹುಣಸೂರು ಶಾಸಕ ಜೆಡಿಎಸ್ ಹಿರಿಯ ನಾಯಕ ಎಚ್.ವಿಶ್ವನಾಥ್ ಎಂದು ಹೇಳಲಾಗುತ್ತಿದೆ. ಎಚ್.ವಿಶ್ವನಾಥ್ ಅವರು ಬಿಜೆಪಿ ಮುಖಂಡ, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡುವ ಮೂಲಕ ಈ ಎಲ್ಲಾ ನಾಟಕೀಯ ಬೆಳವಣಿಗೆಗಳು ಆರಂಭಗೊಂಡಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಗೆರಿಲ್ಲಾ ಆಪರೇಷನ್ ನಡೆದಿದ್ದು ಹೀಗೆ:

ವಿಶ್ವನಾಥ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರ ಭೇಟಿ ಇದೊಂದು ಸಹಜ ಭೇಟಿ ಎಂದೇ ಭಾವಿಸಲಾಗಿತ್ತು. ಆದರೆ ಇಲ್ಲೊಂದು ಭಯಾನಕ ತಿರುವು ಇದೆ ಎನ್ನುವ ವಿಚಾರ ಇಂದು ಬೆಳಕಿಗೆ ಬಂದಿದೆ. ತಿಂಡಿ ತಿನ್ನುವುದಕ್ಕೆ ಬಂದಿದ್ದೇನೆ ಅಂತ ಮುನ್ನೆಲೆಯಲ್ಲಿ ಹೇಳಿದ್ದ ವಿಶ್ವನಾಥ್ ನೋಡ ನೋಡುತ್ತಲೇ ಶ್ರೀನಿವಾಸ್ ಪ್ರಸಾದ್ ಜೊತೆ ಮೂರು ಬಾರಿ ಮಾತುಕತೆ ನಡೆಸಿದ್ದರು. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೊತೆಗೂ ವಿಶ್ವನಾಥ್ ಮಾತುಕತೆ ನಡೆಸಿದರು. ಈಗ ವಿಶ್ವನಾಥ್‍ರನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಈಗ ಕಾಂಗ್ರೆಸ್ ಶಾಸಕರನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.

ಎಚ್.ವಿಶ್ವನಾಥ್ ಅವರು ಶಾಸಕ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸದಲ್ಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಆದರೆ ಈ ಭೇಟಿ ಸ್ನೇಹಪೂರ್ವಕ ಭೇಟಿ ಎಂದೇ ಮೆಲ್ನೋಟಕ್ಕೆ ಭಾವಿಸಲಾಗಿತ್ತು. ವಾಸ್ತವದಲ್ಲಿ ಈ ಚರ್ಚೆಯ ಒಳ ಹುರುಳೇ ಬೇರೆ ಇದೆ ಎನ್ನುವುದು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ರಾಜೀನಾಮೆ ಕೊಟ್ಟಿರುವವರ ಸಾಲಿನಲ್ಲಿ ರಾಮಲಿಂಗಾ ರೆಡ್ಡಿ ಕೂಡ ಇರುವುದರಿಂದ ಇದು ಆಪರೇಷನ್ ನಡೆಸುವುದರ ಬಗ್ಗೆಯೇ ನಡೆದ ಚರ್ಚೆ ಎನ್ನುವುದು ಈಗ ಸಾಬೀತಾಗಿದೆ. ಇದರ ಜೊತೆಗೆ ಜಯನಗರ ಶಾಸಕಿ ಹಾಗೂ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ಖಾನಪುರದ ಶಾಸಕಿ ಅಂಜಲಿ ನಿಂಬಾಳ್ಕಾರ್ ಸಹ ರಾಜೀನಾಮೆ ನೀಡುವ ಶಾಸಕರ ಪಟ್ಟಿಯಲ್ಲಿದ್ದಾರೆ.

ಮುಖ್ಯವಾಗಿ ಮೂವರನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಆಪರೇಷನ್ ಎಸ್‍ಬಿಎಂ ಎನ್ನುವ ಲೇಬಲ್ ಮೇಲೆ ಶಾಸಕರನ್ನು ತಮ್ಮತ್ತ ಸೆಳೆಯುವುದಕ್ಕೆ ಮುಂದಾಗಿತ್ತು ಗೆರಿಲ್ಲಾ ಆಪರೇಷನ್ ಟೀಂ. ಸೋಮಶೇಖರ್(ಎಸ್) ಭೈರತಿ ಬಸವರಾಜು(ಬಿ) ಮುನಿರತ್ನ(ಎಂ). ಹೇಳಿ ಕೇಳಿ ಈ ಮೂವರು ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದವರು. ಅಷ್ಟೇ ಅಲ್ಲದೆ ಈ ಮೂವರು ಕೂಡ ಬೆಂಗಳೂರಿನ ಶಾಸಕರು. ವಿಶ್ವನಾಥ್ ಮೂಲಕ ರಾಮಲಿಂಗಾ ರೆಡ್ಡಿ ಅವರನ್ನು ಟ್ರಂಪ್ ಕಾರ್ಡ್ ಆಗಿ ಇಟ್ಟುಕೊಂಡು ಬಿಜೆಪಿ ಈ ಮೂವರನ್ನು ಕೂಡ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ.

ಮೈತ್ರಿ ಸರ್ಕಾರಕ್ಕೆ ಪ್ರತಿ ಹೆಜ್ಜೆಯಲ್ಲೂ ರೆಬೆಲ್ ಶಾಸಕರು ತೊಡಕಾಗಿದ್ದರು. ಈ ಕಾರಣಕ್ಕಾಗಿ ಬಂಡಾಯ ಶಾಸಕರನ್ನು ಬಿಜೆಪಿ ಸಂಪರ್ಕ ಮಾಡಿತ್ತು. ಸಂಪರ್ಕ ಮಾಡಿದ್ದರೂ ಅದು ಯಶಸ್ವಿಯಾಗಿರಲಿಲ್ಲ. ಹೀಗಾಗಿ ಗೌಪ್ಯವಾಗಿ ಅತೃಪ್ತ ಶಾಸಕರನ್ನು ಬಿಜೆಪಿ ತಮ್ಮತ್ತ ಸೆಳೆದುಕೊಂಡು ಈಗ ಮೈತ್ರಿ ಸರ್ಕಾರದ ಬುಡವನ್ನೇ ಅಲ್ಲಾಡಿಸಿದೆ. ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್ ಆಪರೇಷನ್ ಮಾಡಿ, ಸುಲಭದ ರೀತಿಯಲ್ಲಿ ರಾಜೀನಾಮೆ ಕೊಡಿಸಿದ್ದಾರೆ.

ಬಂಡಾಯ ಶಾಸಕರು ಅಷ್ಟೇ ಅಲ್ಲದೆ ಆನಂದ್ ಸಿಂಗ್, ಸುಬ್ಬಾರೆಡ್ಡಿ, ರಾಮಲಿಂಗಾ ರೆಡ್ಡಿ ಅವರನ್ನು ಸೇರಿಸಿತ್ತು. ಹೀಗೆ ಸಚಿವ ಸ್ಥಾನದಿಂದ ವಂಚಿತಗೊಂಡ ಶಾಸಕರ ಬಳಗವನ್ನು ಒಂದುಗೂಡಿಸಿ ಗೆರಿಲ್ಲಾ ಆಪರೇಷನ್ ಕೊನೆಯ ಹಂತವನ್ನು ಬಿಜೆಪಿ ಯಶಸ್ವಿಯಾಗಿ ಪೂರೈಸಿಕೊಂಡಿತು. ಆದರೆ ಇದೆಲ್ಲದ್ದಕ್ಕೆ ಟೆಸ್ಟಿಂಗ್ ಎಂಬಂತೆ ಮೊದಲು ಆನಂದ್ ಸಿಂಗ್ ಕೈಯಿಂದ ರಾಜೀನಾಮೆ ಕೊಡಿಸಿ ಹೇಗಿದೆ ರಿಯಾಕ್ಷನ್ ಎನ್ನುವುದನ್ನು ಟ್ರಯಲ್ ನೋಡಿತು ಬಿಜೆಪಿ ಎನ್ನಲಾಗಿದೆ.

ತೆರೆಮರೆಯಲ್ಲಿ ಗೆರಿಲ್ಲಾ ಆಪರೇಷನ್ ನಡೆಯುತ್ತಿದೆ ಎನ್ನುವುದನ್ನು ದೋಸ್ತಿ ನಾಯಕರ ಗಮನಕ್ಕೆ ಬರುವಂತೆ ಮಾಡಿತು. ಬಳಿಕ ಸರ್ಕಾರದ ಗಮನ ಬೇರೆಡೆಗೆ ಸೆಳೆಯಲು ಶಾಸಕ ಆನಂದ್ ಸಿಂಗ್ ಅವರಿಂದ ರಾಜೀನಾಮೆ ಕೊಡಿಸಿ ಬಿಜೆಪಿ ವಿಷಯವನ್ನು ಡೈವರ್ಟ್ ಮಾಡಿತು. ಈ ವೇಳೆ ಬಿಜೆಪಿ ಮುಖಂಡ ಅಶೋಕ್ ಅವರು ಪ್ರತಿಕ್ರಿಯಿಸಿ, ಸರ್ಕಾರದ ರಾಜೀನಾಮೆ ಪರ್ವಕ್ಕೆ ಆನಂದ್ ಸಿಂಗ್ ಗುದ್ದಲಿ ಪೂಜೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಏನು ನಡೆಯಲಿದೆ ಎನ್ನುವುದು ಕಾದು ನೋಡಿ ಎಂದು ತಿಳಿಸಿದ್ದರು. ಬಿಜೆಪಿ ನಾಯಕರು ಈ ಹೇಳಿಕೆ ನೀಡುತ್ತಿದ್ದಂತೆ ದೋಸ್ತಿ ನಾಯಕರು ಏನು ನಡೆಯುವುದಿಲ್ಲ. ಈ ಹಿಂದೆ ಈ ಹೇಳಿಕೆಯನ್ನು ನೀಡಿದ್ದರು. ಯಾವುದು ಯಶಸ್ವಿಯಾಗಲಿಲ್ಲ. ಸರ್ಕಾರ 5 ವರ್ಷ ಅಧಿಕಾರ ನಡೆಸುತ್ತದೆ ಎಂದು ಹೇಳಿಕೆ ನೀಡುತ್ತಿದ್ದರು. ಇಂದು ಬೆಳಗ್ಗೆ ಈ ಸುದ್ದಿ ಮೊದಲು ಪ್ರಸಾರ ಮಾಡಿದಾಗಲೂ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಕೆ ಶಿವಕುಮಾರ್ ಯಾರು ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡುವುದೆಲ್ಲ ಸುಳ್ಳು ಸುದ್ದಿ ಎಂದಿದ್ದರು.

ದೋಸ್ತಿ ನಾಯಕರು ಸರ್ಕಾರಕ್ಕೆ ಏನು ಆಗುವುದಿಲ್ಲ. ಭದ್ರವಾಗಿರುತ್ತದೆ ಎಂದು ಹೇಳುತ್ತಿದ್ದರೆ ಇತ್ತ ಇತ್ತ ಕೈ ಶಾಸಕರ ಜೊತೆ ಜೆಡಿಎಸ್ ಶಾಸಕರು ಸ್ಪೀಕರ್ ಕಚೇರಿಗೆ ಆಗಮಿಸಿ ರಾಜೀನಾಮೆ ನೀಡಿದ್ದರು.

ರಾಜೀನಾಮೆ ಕೊಟ್ಟ ಶಾಸಕರು:
* ಎಚ್ ವಿಶ್ವನಾಥ್- ಹುಣಸೂರು (ಜೆಡಿಎಸ್)
* ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
* ರಮೇಶ್ ಜಾರಕಿಹೊಳಿ- ಗೋಕಾಕ್
* ಎಸ್.ಟಿ ಸೋಮಶೇಖರ್- ಯಶವಂತಪುರ
* ಪ್ರತಾಪ್ ಗೌಡ ಪಾಟೀಲ್- ಮಸ್ಕಿ
* ಬಿ.ಸಿ ಪಾಟೀಲ್- ಹಿರೇಕೆರೂರು
* ಮಹೇಶ್ ಕುಮಟಳ್ಳಿ- ಅಥಣಿ
* ನಾರಾಯಣ ಗೌಡ- ಕೆ. ಆರ್ ಪೇಟೆ(ಜೆಡಿಎಸ್)
* ಭೈರತಿ ಬಸವರಾಜ್- ಕೆ.ಆರ್ ಪುರಂ
* ಶಿವರಾಂ ಹೆಬ್ಬಾರ್- ಯಲ್ಲಾಪುರ
* ಮುನಿರತ್ನ- ರಾಜರಾಜೇಶ್ವರಿ ನಗರ
* ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್(ಜೆಡಿಎಸ್)

Share This Article
Leave a Comment

Leave a Reply

Your email address will not be published. Required fields are marked *