11 ವರ್ಷದ ಬಳಿಕ ಚಾಮರಾಜನಗರ ನಗರಸಭೆಯಲ್ಲಿ ಅರಳಿತು ಕಮಲ: ಪುಟ್ಟರಂಗಶೆಟ್ಟಿಗೆ ಮುಖಭಂಗ

Public TV
1 Min Read

ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿದ್ದ ಚಾಮರಾಜನಗರ ನಗರಸಭೆಯ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, ಈ ಮೂಲಕ 11 ವರ್ಷಗಳ ಬಳಿಕ ಕಮಲ ಅರಳಿದಂತಾಗಿದೆ. ಆಶಾ ನಟರಾಜು ಅಧ್ಯಕ್ಷೆಯಾಗಿ, ಸುಧಾ ಉಪಾಧ್ಯಕ್ಷೆಯಾಗಿ ಗದ್ದುಗೆ ಏರಿದ್ದಾರೆ.

ಬಿಜೆಪಿಯ ಮಮತಾ ಬಾಲಸುಬ್ರಹ್ಮಣ್ಯ ಹಾಗೂ ಸುಧಾ ನಡುವೆ ಅಧ್ಯಕ್ಷ ಪದವಿಗಾಗಿ ತೀವ್ರ ಪೈಪೋಟಿ ನಡೆದು ಹಲವು ಸಭೆಗಳ ಬಳಿಕ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆಶಾ ನಟರಾಜು ಹೆಸರು ಅಂತಿಮವಾಗಿ ನಾಮಪತ್ರ ಸಲ್ಲಿಸಿದರು.

ಬಿಎಸ್‍ಪಿ, ಸಂಸದರ ಮತದಿಂದ ಗೆಲವು
ಸಂಸದ, ಶಾಸಕರಿಗೂ ಮತದಾನ ಹಕ್ಕಿರುವುದರಿಂದ ವಿ.ಶ್ರೀನಿವಾಸಪ್ರಸಾದ್ ಮತ್ತು ಬಿಎಸ್‍ಪಿಯಿಂದ ಆಯ್ಕೆಯಾಗಿರುವ ಶಾಸಕ ಮಹೇಶ್ ಬೆಂಬಲಿಗರಾದ ಪ್ರಕಾಶ್ ಬಿಜೆಪಿಗೆ ಮತ ನೀಡುವ ಮೂಲಕ ಕಮಲ ಜಯಭೇರಿ ಬಾರಿಸಲು ಸಹಾಯ ಮಾಡಿದರು.

ಫಲಿಸದ ಕೈ ತಂತ್ರ
ಕಾಂಗ್ರೆಸ್ ನಿಂದ ಅಧ್ಯಕ್ಷ ಅಭ್ಯರ್ಥಿಯಾಗಿ ಶಾಂತಿ, ಉಪಾಧ್ಯಕ್ಷೆ ಅಭ್ಯರ್ಥಿಯಾಗಿ ಚಂದ್ರಕಲಾ ನಾಮಪತ್ರ ಸಲ್ಲಿಸಿದ್ದರು. ಎಸ್‍ಡಿಪಿಐ, ಪಕ್ಷೇತರ ಹಾಗೂ ಬಿಎಸ್‍ಪಿ ಸದಸ್ಯರೆಲ್ಲರ ಮತ ಪಡೆದು ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆದಿತ್ತು. ಆದರೆ ಬಿಎಸ್‍ಪಿ ಸದಸ್ಯ ಕಮಲಕ್ಕೆ ಜೈ ಎನ್ನುವ ಮೂಲಕ ಕೈ ರಣತಂತ್ರ ವಿಫಲಗೊಳಿಸಿದರು. ಇದರೊಟ್ಟಿಗೆ ಶಾಸಕ ಪುಟ್ಟರಂಗಶೆಟ್ಟಿ ಅಧಿಕಾರ ಉಳಿಸಿಕೊಳ್ಳಲಾಗದೆ ಮುಖಭಂಗ ಅನುಭವಿಸಿದರು. ಶಾಸಕ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ಮತ ಚಲಾಯಿಸಲು ಬಾರದಿದ್ದರಿಂದ ಕಾಂಗ್ರೆಸ್ 14 ಹಾಗೂ ಬಿಜೆಪಿ 17 ಮತಗಳನ್ನು ಪಡೆಯಿತು.

2009ರಲ್ಲಿ ಮಹಾದೇವ ನಾಯ್ಕ ಅವರು ಅಧ್ಯಕ್ಷರಾಗುವ ಮೂಲಕ ಮೊದಲ ಬಾರಿ ಚಾಮರಾಜನಗರದಲ್ಲಿ ಕಮಲ ಅರಳಿಸಿದ್ದರು. ಇದಾದ ಬಳಿಕ ಈಗ ನಗರಸಭೆ ಮತ್ತೆ ಬಿಜೆಪಿ ತೆಕ್ಕೆಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *