ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ 109ಕ್ಕೆ ಏರಿಕೆ: ರಾಜ್ಯದಲ್ಲಿ ಮತ್ತೊಂದು ಕೇಸ್

Public TV
2 Min Read

– ಮಹಾರಾಷ್ಟ್ರದಲ್ಲಿ 31 ಕೇಸ್
– ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು?
– ವಿಶ್ವಾದ್ಯಂತ ಕೊರೊನಾಗೆ 5,900 ಮಂದಿ ಬಲಿ

ಬೆಂಗಳೂರು: ದೇಶದಲ್ಲಿ ಭಾನುವಾರ ಕೊರೊನಾ ವೈರಸ್ ಸೋಂಕಿನ 10 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಕೇರಳದಲ್ಲಿ ಮೂರು, ಮಹಾರಾಷ್ಟ್ರದಲ್ಲಿ ಆರು, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ತಲಾ ಒಂದು ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ವೈರಸ್ ರೋಗಿಗಳ ಸಂಖ್ಯೆ 109ಕ್ಕೆ ಏರಿಕೆ ಕಂಡಿದೆ.

ದೆಹಲಿಯಲ್ಲಿ ಸೋಂಕಿಗೆ ಒಳಗಾದ ಮೊದಲ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕೊರೊನಾ ಶಂಕಿತ 5 ಜನ ಹಾಗೂ ದೆಹಲಿಯಲ್ಲಿ 105 ಜನರನ್ನು ಗುರುತಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

ಉಗುಳಿದ್ರೆ 500 ರೂ. ದಂಡ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದು ವಾರ ಕಾಲ ಬಂದ್ ಘೋಷಣೆ ಮಾಡಿದೆ. ಇತ್ತ ಗುಜರಾತ್ ಮುಖ್ಯ ಕಾರ್ಯದರ್ಶಿ ಅನಿಲ್ ಮುಕಿಮ್ ಅವರು, ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

ಕೊರೊನಾ ವೈರಸ್‍ನಿಂದಾಗಿ ದೇಶದ 20 ರಾಜ್ಯಗಳು ಹೈರಾಣಾಗಿವೆ. ವೈರಸ್ ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲೇ 30ರ ಗಡಿದಾಟಿದೆ. ಪುಣೆಯಲ್ಲಿ ಒಟ್ಟು 16 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಕೊರೊನಾ ಬಗ್ಗೆ ಮೊದಲೆರಡು ವಿಧದ ಪರೀಕ್ಷೆಯನ್ನು ಉಚಿತವಾಗಿ ಮಾಡಿಸಬೇಕು ಅಂತ ಕೇಂದ್ರ ಆರೋಗ್ಯ ಸಚಿವಾಲಯ ಆದೇಶಿಸಿದೆ. ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ 

ಕರ್ನಾಟಕದಲ್ಲಿ ಕೊರೊನಾ:
ಕಲಬುರಗಿಯಲ್ಲಿ ಸಾವನ್ನಪ್ಪಿದ ವೃದ್ಧನ ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ವೈರಸ್ ತಗುಲಿರುವುದು ವರದಿಯಲ್ಲಿ ದೃಢವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಇಬ್ಬರಿಗೆ, ಧಾರವಾಡದಲ್ಲಿ ಓರ್ವರಿಗೆ, ಮಡಿಕೆರಿಯಲ್ಲಿ ಓರ್ವರಿಗೆ ಹಾಗೂ ನೆಲಮಂಗಲದಲ್ಲಿ ಓರ್ವ ಕೊರೊನಾ ಶಂಕಿರನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ, ಚಿಕಿತ್ಸೆ ಕೊಡಲಾಗುತ್ತಿದೆ.

ವಾರಗಳ ಕಾಲ ಕೊರೊನಾ ಬಂದ್‍ನಿಂದಾಗಿ 2ನೇ ದಿನವೇ ರಾಜ್ಯದಲ್ಲಿ ಭರ್ತಿ 6.67 ಸಾವಿರ ಕೋಟಿ ನಷ್ಟವಾಗಿದೆ. ಸರ್ಕಾರದ ಆದೇಶವನ್ನು ಬೆಂಗಳೂರು ಜನ, ಉದ್ಯಮಿಗಳು ಪಾಲಿಸಿದ್ದಾರೆ. ಆದರೆ, ಬಾರ್ ಮಾಲೀಕರು ಸಡ್ಡು ಹೊಡೆದಿದ್ದಾರೆ. ಈ ಮಧ್ಯೆ, ರಾಜ್ಯದಲ್ಲಿ ಇಲ್ಲಿಯವರೆಗೆ ಹೊಸದಾಗಿ ಕೊರೋನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿಲ್ಲ. ಆದರೆ, 31 ಶಂಕಿತರಿಗೆ ಚೆಕಪ್ ಮಾಡಲಾಗಿದೆ ಅಂತ ಸರ್ಕಾರ ಹೇಳಿದೆ.

ಚೀನಾದ ಹೆಮ್ಮಾರಿ ಕಾಟ ಹೇಳಲು ಆಗದಷ್ಟು ಶೀಘ್ರವಾಗಿ ವಿಶ್ವವನ್ನು ವ್ಯಾಪಿಸುತ್ತಿದೆ. ಈಗಾಗಲೇ ವಿಶ್ವದ 148 ದೇಶಗಳನ್ನು ಹೊಕ್ಕಿರುವ ಕೊರೊನಾ 1,60,000 ಮಂದಿಯನ್ನು ಆವರಿಸಿದ್ದು, 5,900 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಚೀನಾದಲ್ಲಿ 3,200 ಹಾಗೂ ಇಟಲಿಯಲ್ಲಿ 1,450 ಮಂದಿ ಮೃತಪಟ್ಟಿದ್ದಾರೆ. 76,000 ಜನ ಚೇತರಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *