108 ಅಂಬುಲೆನ್ಸ್ ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ: ಆರೋಗ್ಯ ಇಲಾಖೆ ಸ್ಪಷ್ಟನೆ

Public TV
2 Min Read

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ 108 ಅಂಬುಲೆನ್ಸ್ (108 Ambulance)  ಕರೆ ಸ್ವೀಕಾರ ವ್ಯವಸ್ಥೆಯಲ್ಲಿ, ತಾಂತ್ರಿಕ ತೊಂದರೆಯಿಂದಾಗಿ, ವ್ಯತ್ಯಯ ಉಂಟಾಗಿತ್ತು. ಈಗ ಅದನ್ನು ಸರಿ ಪಡಿಸಲಾಗಿದ್ದು ಕರೆ ಸ್ವೀಕಾರ ಸೇವೆ ಪುನರಾರಂಭ ಗೊಂಡಿದೆ. ಆದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಯ ಡಿಎಚ್‍ಒಗಳ (DHO) ಹೆಚ್ಚುವರಿ ದೂರವಾಣಿ ಸಂಖ್ಯೆಗಳನ್ನು ಅಯಾ ಜಿಲ್ಲೆಯ ಜನರಿಗೆ ಒದಗಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ  (Health department)  ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Dr.K Sudhakar)  ಟ್ವೀಟ್ ಮಾಡಿದ್ದು, 108 – ಆರೋಗ್ಯ ಕವಚ ಅಂಬುಲೆನ್ಸ್ ಸೇವೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಮತ್ತು ಅಂಬುಲೆನ್ಸ್ ಸೇವೆಯಲ್ಲಿ ಯಾವುದೇ ಅಡಚಣೆಯಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಸ್ಥಾಪಿಸುವ ಕುರಿತಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ಜರುಗಿತು. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಕರೆಗೆ ಸ್ಪಂದಿಸಿ ಸೇವೆ ಒದಗಿಸಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ: ಕಾಂಗ್ರೆಸ್

ತಾತ್ಕಾಲಿಕವಾಗಿ ಬ್ಯಾಕ್‍ಅಪ್ ಸರ್ವರ್ ಅಳವಡಿಸಲಾಗಿದ್ದು, ದೋಷಪೂರಿತ ಮುಖ್ಯ ಸರ್ವರ್ ಅನ್ನು ದುರಸ್ತಿ ಮಾಡುವ ಕಾರ್ಯ ಚಾಲ್ತಿಯಲ್ಲಿದೆ. ಈ ಎಲ್ಲ ಕ್ರಮಗಳ ಜೊತೆ ತಡೆರಹಿತ ಸೇವೆ ಖಾತ್ರಿಪಡಿಸಿಕೊಳ್ಳಲು ಪ್ರತೀ ಜಿಲ್ಲೆಯಲ್ಲಿ 3-4 ವಿಕೇಂದ್ರೀಕೃತ ಕಾಲ್ ಸೆಂಟರ್ ವ್ಯವಸ್ಥೆ ಮಾಡಲಾಗಿದ್ದು ಇದರ ಬಗ್ಗೆ ಸ್ಥಳೀಯ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಇದನ್ನೂ ಓದಿ: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು: ಸಿದ್ದುಗೆ ಬೊಮ್ಮಾಯಿ ಟಾಂಗ್‌

ನಿನ್ನೆಯಿಂದ 108 ಅಂಬುಲೆನ್ಸ್ ಸೇವೆ ಸರಿಯಾಗಿ ಕಾರ್ಯಚರಣೆ ಮಾಡುತ್ತಿರಲಿಲ್ಲ. ತಾಂತ್ರಿಕ ದೋಷದ ಕಾರಣ 108 ಕಾಲ್ ಸೆಂಟರ್ ವರ್ಕ್ ಆಗುತ್ತಿರಲಿಲ್ಲ. ಇದರಿಂದಾಗಿ ಸಕಾಲಕ್ಕೆ ಅಂಬುಲೆನ್ಸ್ ಸಿಗದೇ, ಸಕಾಲಕ್ಕೆ ವೈದ್ಯಕೀಯ ನೆರವು ಸಿಗದೇ ರಾಜ್ಯಾದ್ಯಂತ ರೋಗಿಗಳು ಪರದಾಡಿದ್ದಾರೆ. ಒಂದು ಜೀವ ಕೂಡ ಹೋಗಿದೆ. ಅನಾರೋಗ್ಯದಿಂದ ಬಳಲ್ತಿದ್ದ ತುಮಕೂರು ಜಿಲ್ಲೆ ಐಡಿ ಹಳ್ಳಿಯ ಜಯಮ್ಮ ಎಂಬಾಕೆ ಸಕಾಲಕ್ಕೆ ಅಂಬುಲೆನ್ಸ್ ಸಿಗದೇ ಸಾವನ್ನಪ್ಪಿದ್ದಾರೆ. 108 ಸೇವೆಗಳಿಗಾಗಿ ಜಿವಿಕೆ-ಇಎಂಆರ್‌ಐ ಕಾಲ್‍ಸೆಂಟರ್‌ನಲ್ಲಿ 2008ರಲ್ಲಿ ಅಳವಡಿಸಿದ್ದ ಆರೆಂಜಸ್ ಟೆಕ್ನಾಲಜಿ ಸಾಫ್ಟ್‌ವೆರ್ ಅಪ್‍ಡೇಟ್ ಮಾಡದ ಕಾರಣ ವೈರಸ್ ಅಟ್ಯಾಕ್ ಆಗಿ ಇಷ್ಟೆಲ್ಲಾ ಅವಾಂತರ ಉಂಟಾಗಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಶಿಫ್ಟ್ ಸಹ ಅಂಬುಲೆನ್ಸ್‌ಗಳಿಗೆ ಕೃತಕ ಬರ ಬಂದಿತ್ತು. ರೋಗಿಗಳ ಸಂಬಂಧಿಕರು 108 ಅವ್ಯವಸ್ಥೆಗಳಿಗೆ ತೀವ್ರ ಆಕ್ರೋಶ ಹೊರಹಾಕಿದ್ರು. ಈ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ನಿರಂತರ ವರದಿ ಕಾರಣ, ಆರೋಗ್ಯ ಇಲಾಖೆ ಎಚ್ಚೆತ್ತು, ತಾತ್ಕಾಲಿಕವಾಗಿ ಪರ್ಯಾಯ ಸೇವೆ ಕಲ್ಪಿಸಲು ಪ್ರಯತ್ನಿಸಿತು. 108 ಬದಲಿಗೆ 112ಕ್ಕೆ ಕರೆ ಮಾಡಿ ಅಂಬುಲೆನ್ಸ್ ಸೇವೆ ಪಡೆಯಲು ಸೂಚಿಸಿತು. ಬೆಂಗಳೂರು, ತುಮಕೂರು, ನೆಲಮಂಗಲ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ವಿಜಯಪುರ ಸೇರಿ ಬಹುತೇಕ ಕಡೆ ಈ ಸಮಸ್ಯೆ ಕಂಡುಬಂತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *