ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

Public TV
2 Min Read

ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಧ್ಯೆ ರಾತ್ರಿಯಿಂದಲೇ ತೆರೆಯ ಮೇಲೆ ಅಪ್ಪು ರಾರಾಜಿಸುತ್ತಾ ಇದ್ದಾರೆ. ಇಂದು ಅವರ ಹುಟ್ಟುಹಬ್ಬವೂ ಆಗಿರುವುದರಿಂದ ಒಂದು ರೀತಿಯಲ್ಲಿ ಜಾತ್ರೆಯ ವಾತಾವರಣವೇ ಥಿಯೇಟರ್ ಮುಂದಿದೆ. ಆದರೆ, ಅಪ್ಪು ಇಲ್ಲ ಎನ್ನುವ ಕೊರಗು ಸದಾ ಇದ್ದೇ ಇರುತ್ತದೆ.

ಜೇಮ್ಸ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ. ಖಂಡಿತಾ ಈ ಸೆಂಟಿಮೆಂಟ್ ಸಿನಿಮಾಗೆ ಬಂದ ಮೇಲೆ ವರ್ಕ್ ಆಗಲ್ಲ. ಸೆಂಟಿಮೆಂಟ್ ಆಚೆಯೂ ಸಿನಿಮಾ ಗೆದ್ದು ನಿಲ್ಲುತ್ತದೆ. ಕಾರಣ ‘ಪವರ್ ಸ್ಟಾರ್’. ಸಾಮಾನ್ಯವಾಗಿ ಕಥೆಯೇ ಇಲ್ಲದೇ ಸ್ಟಾರ್ ನಟರು ಚಿತ್ರ ಮಾಡುತ್ತಾರೆ ಎನ್ನುವ ಆರೋಪವಿದೆ. ಆದರೆ, ಜೇಮ್ಸ್ ಸಿನಿಮಾದಲ್ಲಿ ಭರ್ಜರಿ ಕಥೆಯಿದೆ. ಅದು ಕೇವಲ ನಮ್ಮ ನೆಲದ ಕಥೆ ಮಾತ್ರವಲ್ಲ, ವಿದೇಶಿ ನೆಲದಲ್ಲೂ ಬೇರೂರಿರುವಂತಹ ಕಥಾವಸ್ತುವನ್ನು ಅದು ಹೊಂದಿದೆ. ಇದನ್ನೂ ಓದಿ : ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

ಅಪ್ಪು ಎಂಟ್ರಿನೇ ಮೈ ಜುಮ್ಮೆನಿಸುತ್ತದೆ. ಅದರಲ್ಲೂ ಕಾರ್ ಚೇಸಿಂಗ್ ದೃಶ್ಯ ನೋಡುಗರ ಎದೆ ನಡುಗಿಸುತ್ತದೆ. ಹೇಳಿ ಕೇಳಿ ಪುನೀತ್ ರಾಜ್ ಕುಮಾರ್ ಆಕ್ಷನ್ ಕಿಂಗ್. ಅವರಿಗೆ ಹೇಳಿ ಮಾಡಿಸಿದಂತೆಯೆ ಸಾಹಸ ದೃಶ್ಯಗಳ ಸಂಯೋಜನೆ. ರವಿವರ್ಮಾ ಅದ್ಭುತವಾಗಿ ಸ್ಟಂಟ್ ಕೊರಿಯೋಗ್ರಫಿ ಮಾಡಿದ್ದಾರೆ. ಅಪ್ಪು ಕಾಲುಗಳು ಬೆಳೆದದ್ದೇ ಡಾನ್ಸ್ ಮಾಡಲು. ಪುನೀತ್ ರಾಜ್ ಕುಮಾರ್ ಸಿನಿಮಾಗಳೆಂದರೆ, ಅಲ್ಲಿ ಹಾಡಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಯಾಕೆಂದರೆ, ಹಾಡಿಗೂ ಮತ್ತು ಇವರು ಹಾಕುವ ಸ್ಟೆಪ್ ಗೂ ಒಂದು ರೀತಿಯಲ್ಲಿ ಜುಗಲ್ಬಂದಿಯೇ ಏರ್ಪಾಟಾಗುತ್ತದೆ. ಈ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗದೇ ಇದ್ದರೂ, ಇರೋ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ ಪುನೀತ್ ರಾಜ್ ಕುಮಾರ್. ಚರಣ್ ರಾಜ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಕೂಡ ಕಾಡುತ್ತವೆ. ಹಿನ್ನೆಲೆ ಸಂಗೀತ ಸಂಯೋಜನೆ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ.

ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಎರಡು ಶೇಡ್ ಇರುವಂತಹ ಪಾತ್ರ ಮಾಡಿದ್ದಾರೆ. ಒಂದು ಸೈನಿಕನಾಗಿ ಮತ್ತೊಂದು ಸೆಕ್ಯುರಿಟಿ ಏಜೆನ್ಸಿ ನಡೆಸುವ ಮುಖ್ಯಸ್ಥನಾಗಿ. ಮೇಜರ್ ಪಾತ್ರಕ್ಕೆ ಪುನೀತ್ ಅವರು ಜೀವ ತುಂಬಿದ್ದಾರೆ. ಫ್ಲ್ಯಾಶ್ ಬ್ಯಾಕ್ ಗೆ ಹೊರಳುವ ಕಥೆಯಲ್ಲಿ ಇನ್ನೂ ಸಖತ್ ಆಗಿ ಕಾಣುತ್ತಾರೆ. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

ಮೇಲ್ನೊಟಕ್ಕೆ ಇದೊಂದು ಸೇಡಿನ ಕಥೆ ಅಂತ ಅನಿಸಿದರೂ, ಇಲ್ಲೊಂದು ದೇಶಪ್ರೇಮದ ಟಿಸಿಲಿದೆ. ಗೆಳೆತನದ ಮಹತ್ವ ಸಾರುವ ಸಾಲಿದೆ. ಜಗತ್ತನ್ನೇ ಆತಂಕಕ್ಕೆ ದೂಡಿದ ಡ್ರಗ್ಸ್ ಮಾಫಿಯಾ ಕೂಡ ಕಥೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡುವ ದೃಶ್ಯವೇ ಹೊಸದೆನಿಸುತ್ತದೆ.

ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಪಾರ್ವತಮ್ಮ ರಾಜ್ ಕುಮಾರ್ ಆಸೆ ಆಗಿತ್ತು. ಆ ಆಸೆಯು ಈ ಸಿನಿಮಾದಲ್ಲಿ ಈಡೇರಿದೆ. ಬಾಲ್ಯದ ಸನ್ನಿವೇಶಕ್ಕೆ ಕಥೆ ತಿರುಗಿದಾಗ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕಾಣಿಸುತ್ತಾರೆ. ಇದನ್ನೂ ಓದಿ : ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

ಪುನೀತ್ ಅವರ ಜತೆ ನಟಿಸಿದ ತಾರಾಬಳಗ ಕೂಡ ದೊಡ್ಡದಿದೆ. ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ಶ್ರೀಕಾಂತ್, ಆದಿತ್ಯ ಮೆನನ್ ಹೀಗೆ ಅನುಭವಿ ಕಲಾವಿದರ ಬಳಗವೇ ಸಿನಿಮಾದಲ್ಲಿದೆ. ಹೀಗೆ ಸಿನಿಮಾ ನೋಡಲು ನೂರಾರು ಕಾರಣಗಳನ್ನು ಕೊಡಬಹುದು.

Share This Article
Leave a Comment

Leave a Reply

Your email address will not be published. Required fields are marked *