ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

Public TV
2 Min Read

– ಒಂದೇ ದಿನ ಎರಡು ದಾಖಲೆ

ಉಡುಪಿ: ಈಗಾಗಲೇ ಎರಡು ವಿಶ್ವದಾಖಲೆ ಮಾಡಿರುವ 10ರ ಪೋರಿ, ಒಂದೇ ದಿನ ಮತ್ತೆರಡು ದಾಖಲೆ ಮಾಡಿದ್ದಾಳೆ. ದೇಹದೊಳಗೆ ಮೂಳೆ ಇದ್ಯೋ ಇಲ್ಲವೋ ಅಂತ ಡೌಟ್ ಬರುವಂತೆ ಉಡುಪಿಯ ತನುಶ್ರೀ ಸಾವಿರಾರು ಜನರನ್ನು ಚಕಿತಗೊಳ್ಳುವಂತೆ ಮಾಡಿದ್ದಾಳೆ.

ಉಡುಪಿಯ ತನುಶ್ರೀ ಪಿತ್ರೋಡಿಗೆ ಈ 10 ವರ್ಷ. ಆದರೆ ಜೀವಮಾನದಲ್ಲಿ ಹೆಚ್ಚಿನವರಿಂದ ಅಸಾಧ್ಯವಾದುದನ್ನು ಬಾಲ್ಯದಲ್ಲೇ ಸಾಧಿಸಿದ್ದಾಳೆ. ಭರತನಾಟ್ಯ- ಯಕ್ಷಗಾನ ಕಲೆಯಲ್ಲಿ ಪರಿಣತಿ ಪಡೆದಿರುವ ಈಕೆ ಯೂಟ್ಯೂಬ್‍ನಲ್ಲಿ ನೋಡಿ ಯೋಗ ಕಲಿತು ವಿಶ್ವದಾಖಲೆ ಮೇಲೆ ವಿಶ್ವದಾಖಲೆ ಮಾಡಿದ್ದಾಳೆ. ತನುಶ್ರೀ ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಹಿಂದೆ ನಿರಾಲಂಭ ಪೂರ್ಣ ಚಕ್ರಾಸನದಲ್ಲಿ ಎರಡು ದಾಖಲೆ ಮಾಡಿದ್ದಳು. 1 ನಿಮಿಷದಲ್ಲಿ 42 ಬಾರಿ ಆಸನ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಳು. ಇದೀಗ ಒಂದು ನಿಮಿಷದಲ್ಲಿ 60ಕ್ಕೂ ಹೆಚ್ಚು ಬಾರಿ ಧನುರಾಸನ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ.

ಸಂಸ್ಥೆಯ ಏಷ್ಯಾ ಹೆಡ್ ಮನೀಷ್ ಉಡುಪಿಗೆ ಬಂದು ಸಾಧಕಿ ತನುಶ್ರೀಗೆ ಸರ್ಟಿಫಿಕೇಟ್ ಕೊಟ್ಟು ಬೆನ್ನು ತಟ್ಟಿದ್ದಾರೆ. ಈ ಹಿಂದೆಯೂ ಬಾಲಕಿಯ ಸಾಧನೆ ನೋಡಿದ್ದೇವೆ. ಜೀವನದಲ್ಲಿ ಮತ್ತಷ್ಟು ದಾಖಲೆಗಳು ಮಾಡುವ ಮತ್ತು ಬೆಳೆದು ದೊಡ್ಡ ಹೆಸರು ಮಾಡುವ ಎಲ್ಲಾ ಲಕ್ಷಣ ಇದೆ ಅಂತ ಹೇಳಿದರು.

ಸಾಧಕಿ ತನುಶ್ರೀ ಮಾತನಾಡಿ, ಮೈದಾನದಲ್ಲಿ ನಾನು ಪ್ರ್ಯಾಕ್ಟೀಸ್ ಮಾಡಿಯೇ ಇರಲಿಲ್ಲ. ಕ್ಯಾಮೆರಾಗಳು, ಜನರು ಎಲ್ಲ ಸೇರಿದಾಗ ಬಹಳ ಮುಜುಗರ ಆಯ್ತು. ನರ್ವಸ್ ಆಗದಂತೆ ತಂದೆ ತಾಯಿ ಹುರಿದುಂಬಿಸಿದರು. ಕಾನ್ಸನ್ಟ್ರೇಶನ್ ಮಾಡಿ ಸಾಧಿಸಿಯೇ ಬಿಟ್ಟೆ ಅಂತ ಹೇಳಿದ್ದಾಳೆ.

ಮನೆಯೊಳಗೆ ಚಾವಡಿಯಲ್ಲಿ- ಟೆರೇಸ್ ಮೇಲೆ ಅಭ್ಯಾಸ ಮಾಡುತ್ತಿದ್ದ ತನ್ನ ಶಾಲೆಯ ಮೈದಾನದಲ್ಲಿ ಪ್ರಥಮ ಪ್ರಯೋಗದಲ್ಲೇ ದಾಖಲೆ ಮಾಡಿದ್ದಾಳೆ. ತಂದೆ ಉದಯಕುಮಾರ್- ತಾಯಿ ಸಂಧ್ಯಾ ಈ ಸಾಧನೆಯ ಹಿಂದಿರುವ ಬೆನ್ನೆಲುಬು.

ತನುಶ್ರೀ ತಂದೆ ಉದಯಕುಮಾರ್, ತಾಯಿ ಸಂಧ್ಯಾ ಮಾತನಾಡಿ, ನಾವು ಅವಳಿಗೆ ಎಲ್ಲಾ ವಿಷಯದಲ್ಲಿ ಸಪೋರ್ಟ್ ಮಾಡುತ್ತೇವೆ. ಯೋಗ ಕ್ಲಾಸಿಗೆ ಅವಳು ಹೋಗದೇ ಯುಟ್ಯೂಬ್ ನೋಡಿಯೇ ಈ ನಾಲ್ಕು ದಾಖಲೆ ಮಾಡಿದ್ದಾಳೆ. ಯಕ್ಷಗಾನ -ಭರತನಾಟ್ಯದಲ್ಲೂ ಸಾಧನೆ ಮಾಡುವ ಹಂಬಲ ಅವಳಲ್ಲಿದೆ. ಕಲಿಕೆಯಲ್ಲೂ ಮುಂದಿರುವುದರಿಂದ ಪಠ್ಯೇತರ ಚಟುವಟಿಕೆಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ಸಾಧಕಿಗೆ ಸ್ಥಳದಲ್ಲೇ ಪ್ರಾವಿಜನ್ ಸರ್ಟಿಫಿಕೇಟ್ ಕೊಡಲಾಗಿದೆ. ಯೋಗ ದಿನಾಚರಣೆಯ ಪಬ್ಲಿಕ್ ಹೀರೋ ಆಗಿದ್ದ ತನುಶ್ರೀ ಒಂದು ನಿಮಿಷದ ರೆಕಾರ್ಡ್ ಜೊತೆ ತನುಶ್ರೀ ಮೋಸ್ಟ್ ನಂಬರ್ ಆಫ್ ಧನುರಾಸನ ಎಂಬ ದಾಖಲೆಯನ್ನೂ ಮಾಡಿದ್ದಾಳೆ. ಒಂದು ನಿಮಿಷ 1.46 ಸೆಕೆಂಡುಗಳ ಕಾಲ ಧನುರಾಸನ ಮಾಡಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾಳೆ. ಮತ್ತಷ್ಟು ದಾಖಲೆ ಮಾಡುವ ತಯಾರಿಯನ್ನು ತನುಶ್ರೀ ಮಾಡಿಕೊಳ್ಳುತ್ತಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *