10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿ- ಕೇಂದ್ರಕ್ಕೆ ಪರಮೇಶ್ವರ್ ಒತ್ತಾಯ

Public TV
3 Min Read

ಬೆಂಗಳೂರು: ರಾಜ್ಯದಲ್ಲಿ ನೆರೆ ಪರಿಸ್ಥಿತಿ ವಿಪರೀತವಾಗಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪ್ರಧಾನಿ ಅಥವಾ ಕೇಂದ್ರ ಸಚಿವರು ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿ, 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.

ಸದಾಶಿವನಗರದ ಬಿಡಿಎ ಕ್ವಾಟರ್ಸ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸ್ಥಿತಿ ನಿಭಾಯಿಸಲು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರವೇ ಇಲ್ಲ. ಸರ್ಕಾರ ಇಲ್ಲದ ಕಾರಣ ಅಧಿಕಾರಿಗಳು ಆರಾಮವಾಗಿ ಕುಳಿತಿದ್ದಾರೆ. ಯಾವ ನೋಡೆಲ್ ಅಧಿಕಾರಿಗಳು ಕ್ಯಾಂಪ್ ಮಾಡಿಲ್ಲ. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಯಾಕೆ ಮಾಡಿಲ್ಲ ಎಂಬ ಕಾರಣ ಬಹಿರಂಗ ಪಡಿಸಬೇಕು ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರದಿಂದ ತಂಡ ಆಗಮಿಸಿ ಸೂಕ್ತ ಸಮೀಕ್ಷೆ ನಡೆಸಬೇಕು. ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರಾಜ್ಯದಲ್ಲಿ ಸಚಿವ ಸಂಪುಟ ಇಲ್ಲದೆ ಬಿಜೆಪಿ ಸರ್ಕಾರ ನಡೆಸುತ್ತಿದೆ. ತುಂಬಾ ಪ್ರಯತ್ನ ಮಾಡಿ ಪ್ರಜಾಪ್ರಭುತ್ವದ ವಿರುದ್ಧವಾಗಿ ಸರ್ಕಾರ ರಚನೆ ಮಾಡಿದ್ದಾರೆ. ಆದರೆ, ಸಂಪುಟ ರಚನೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ರಾಜ್ಯದ ದೋಸ್ತಿ ಸರ್ಕಾರವನ್ನು ಮೋದಿ ಮತ್ತು ಅಮಿತ್ ಶಾ ಬೀಳಿಸಿದ್ದಾರೆ. ಇದೀಗ ಸಚಿವ ಸಂಪುಟ ರಚನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ಕೆಲಸ ಆಗುತ್ತಿಲ್ಲ
ರಾಜ್ಯದಲ್ಲಿ ಲಕ್ಷಾಂತರ ಜಾನುವಾರುಗಳು ಸಾವನ್ನಪ್ಪಿವೆ. ಹಲವು ಜನ ಸಹ ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಒಬ್ಬರೆ ಇಡೀ ರಾಜ್ಯವನ್ನು ಹೇಗೆ ನಡೆಸುತ್ತಾರೆ. ಸಚಿವರು ಇದ್ದಿದ್ದರೆ ಸಮಾರೋಪಾದಿಯಲ್ಲಿ ಕೆಲಸ ಆಗುತ್ತಿತ್ತು. ಈಗ ಯಾವ ಕೆಲಸವೂ ಅಗುತ್ತಿಲ್ಲ. ರಾಜ್ಯದಲ್ಲಿ ಯಾವ ಸರ್ಕಾರವೂ ಇಲ್ಲ. ಮುಖ್ಯಮಂತ್ರಿಗಳು ಇಳಿ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದಾರೆ. ಅದರೆ ಅವರಿಗೆ ಯಾವ ಸಹಕಾರ ಸಿಗುತ್ತಿಲ್ಲ. ಲಕ್ಷಾಂತರ ಜನ ನಿರಾಶ್ರಿತರಾದರೂ ಸಹ ಈವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಥಾವ ಅಮಿತ್ ಶಾ ವೈಮಾನಿಕ ಸಮೀಕ್ಷೆ ಮಾಡಿಲ್ಲ ಎಂದು ಆರೋಪಿಸಿದರು.

ಈ ಹಿಂದೆ ಮೈತ್ರಿ ಸರ್ಕಾರ ಇದ್ದಾಗ ಕೇಂದ್ರ ಮಲತಾಯಿ ಧೋರಣೆ ತಾಳಿತ್ತು. ಇದೀಗ ಅವರದ್ದೇ ಸರ್ಕಾರ ಇದೆ, ಆದರೂ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಈವರೆಗೆ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಸಹಕಾರ ಸಿಕ್ಕಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಆದ ಅವಮಾನ. ತಕ್ಷಣವೇ ಅಧಿಕಾರಿಗಳಿಂದ ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಿ, ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಲು ಹಾಗೂ ಸರ್ಕಾರ ಬೀಳಿಸಲು ಇದ್ದ ಆಸಕ್ತಿ ಸಂಪುಟ ರಚಿಸಲು ಇಲ್ಲ. ಹೀಗಾಗಿ ಸಚಿವ ಸಂಪುಟ ರಚನೆಗೆ ವಿಳಂಬವಾಗುತ್ತಿದೆ. ರಾಜ್ಯಪಾಲರು ಕಣ್ಣು ಮುಚ್ಚಿ ಕುಳಿತಿದ್ದಾರಾ? ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ಇರುವುದರಿಂದ ಕಾಯುತ್ತಿದ್ದರೆ ಅದನ್ನು ಬಹಿರಂಗ ಪಡಿಸಿ. ಅವರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದೀರಾ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸಂತ್ರಸ್ತರಿಗೆ ಪರಂ ಸಹಾಯ
ನನ್ನ ಒಂದು ತಿಂಗಳ ಸಂಬಳ ಹಾಗೂ ಸಂಸ್ಥೆಯಿಂದ 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತೇನೆ. ನಮ್ಮ ವೈದ್ಯಕೀಯ ಕಾಲೇಜಿನಿಂದ ಚಿಕಿತ್ಸೆಗೆ ತಂಡ ಕಳುಹಿಸಲು ನಾವು ತಯಾರಿದ್ದೇವೆ. ಕಾಂಗ್ರೆಸ್‍ನ ಎಲ್ಲಾ ಶಾಸಕರು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಬೇಕು ಎಂದು ಈ ಮೂಲಕ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ನಾಯಕರಲ್ಲಿ ವಿನಂತಿಸುತ್ತೇನೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.

ವಿಪಕ್ಷ ಸ್ಥಾನ-ಹೈ ಕಮಾಂಡ್ ನಿರ್ಧಾರ
ಪ್ರತಿಪಕ್ಷ ಸ್ಥಾನದ ನಾಯಕರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತೊ ಅದನ್ನು ಕೇಳುತ್ತೇವೆ. ಪ್ರತಿಪಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಎಚ್.ಕೆ. ಪಾಟೀಲ್, ನನ್ನ(ಪರಮೇಶ್ವರ್) ಹಾಗೂ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬರುತ್ತಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *