ಉತ್ತರ ಕನ್ನಡದ ಬ್ಯಾಂಕ್‍ಗಳಲ್ಲಿ ಕೊಳೆಯುತ್ತಿವೆ ನಾಲ್ಕೂವರೆ ಕೋಟಿ ರೂ.ಗಳ ಹತ್ತು ರೂ. ನಾಣ್ಯ

Public TV
2 Min Read

ಕಾರವಾರ: ಹತ್ತು ರೂ. ನಾಣ್ಯದ ಕುರಿತ ಅಪ ಪ್ರಚಾರದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಬ್ಯಾಂಕ್‍ಗಳಲ್ಲಿ ನಾಲ್ಕೂವರೆ ಕೋಟಿ ರೂ. ಮೊತ್ತದ ಹತ್ತು ರೂಪಾಯಿ ಮುಖಬೆಲೆಯ ನಾಣ್ಯಗಳು ಚಲಾವಣೆಯಾಗದೇ ಉಳಿದಿವೆ.

ಹತ್ತು ರೂ. ನಾಣ್ಯವನ್ನು ಆರ್ ಬಿಐ ರದ್ದುಪಡಿಸಿದೆ ಎಂಬ ಸುಳ್ಳು ವದಂತಿಯಿಂದಾಗಿ ಗ್ರಾಹಕರು ಇವುಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸುಳ್ಳು ಸುದ್ದಿಯಿಂದಾಗಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳಲ್ಲಿ ಕೂಡಲ್ಪಟ್ಟ 10 ರೂ. ನಾಣ್ಯ ಜಿಲ್ಲೆಯ ವಿವಿಧ ಕರೆನ್ಸಿ ಚೆಸ್ಟ್ ಗಳಲ್ಲಿ (ಹಣ ಪೂರೈಸುವ ಬ್ಯಾಂಕ್ ಗಳು)ನಾಲ್ಕೂವರೆ ಕೋಟಿ ರೂ. ಮೊತ್ತದ 10 ರೂ. ನಾಣ್ಯಗಳು ಸಂಗ್ರಹಗೊಂಡು ಕೊಳೆಯುತ್ತಿದೆ.

ರಿಸವ್ ಬ್ಯಾಂಕ್ ಗೂ ಬೇಡವಾದ ಹತ್ತುರೂ ನಾಣ್ಯ!
ಜಿಲ್ಲೆಯ ವಿವಿಧ ಬ್ಯಾಂಕ್‍ಗಳಲ್ಲಿ ಸಂಗ್ರಹವಾದ ನಾಲ್ಕೂವರೆ ಕೋಟಿ ರೂ. ಮೊತ್ತದ ಹಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಪಡೆಯಲು ಸಿದ್ಧವಿಲ್ಲ. ಇತ್ತ ಮಾರುಕಟ್ಟೆಗೆ ಬಿಡಲು ಜನರು ಈ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಕಳೆದ ವರ್ಷ ನೋಟ್ ಬ್ಯಾನ್ ಸಂದರ್ಭದಲ್ಲಿ ಹತ್ತು ರೂ. ನಾಣ್ಯ ಸಹ ಬ್ಯಾನ್ ಆಗಿದೆ ಎಂಬ ಸುಳ್ಳು ವದಂತಿಯಿಂದಾಗಿ ಜಿಲ್ಲೆಯ ಗ್ರಾಹಕರು ಅನುಮಾನದಿಂದ ನೋಡುವಂತಾಗಿದೆ. ಸರ್ಕಾರ ನಾಣ್ಯವನ್ನು ರದ್ದುಪಡಿಸಿಲ್ಲ ಎಂದು ಅಧಿಕೃತ ಪ್ರಕಟಣೆ ನೀಡಿದರೂ, ಜನ ಮಾತ್ರ ನಂಬುತ್ತಿಲ್ಲ. ತಮ್ಮ ಬಳಿ ಇದ್ದ ನಾಣ್ಯವನ್ನು ಸಹ ಬ್ಯಾಂಕ್‍ಗೆ ಜಮಾವಣೆ ಮಾಡಿದ್ದಾರೆ.

ಇದೆಲ್ಲದರ ಮಧ್ಯೆ ನಕಲಿ ನಾಣ್ಯಗಳು ಚಲಾವಣೆಯಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡಿ, ಹತ್ತು ರೂ. ನಾಣ್ಯ ಸಂಪೂರ್ಣವಾಗಿ ಅಘೋಷಿತ ರದ್ದಾಗಿದೆ. ಜಿಲ್ಲೆಯ ವಿವಿಧ ಕರೆನ್ಸಿ ಚೆಸ್ಟ್ ಗಳಲ್ಲಿ 4.5ಕೋಟಿ ರೂ. ಜಮಾವಣೆಯಾಗಿದೆ ಎನ್ನುತ್ತದೆ ಲೀಡ್ ಬ್ಯಾಂಕ್. ಆರ್ ಬಿಐ ಸಹ ಬ್ಯಾಂಕ್ ನಿಂದ ಈ ಕಾಯಿನ್‍ಗಳನ್ನು ತೆಗೆದಯಕೊಳ್ಳದೆ ಮರು ಚಲಾವಣೆ ಮಾಡಿ ಎಂದು ಹೇಳುತ್ತದೆ. ಆದರೆ ಗ್ರಾಹಕರು ಬ್ಯಾಂಕ್‍ನಿಂದ ಈ ನ್ಯಾಣ್ಯಗಳನ್ನು ಪಡೆಯುತ್ತಿಲ್ಲ. ಹೀಗಾಗಿ ಖಜಾನೆಯಲ್ಲಿಯೇ ಉಳಿಯುವಂತಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಸ್.ಪಿಂಜಾರಾ ಬೇಸರ ವ್ಯಕ್ತಪಡಿಸಿದ್ದಾರೆ.

10-20 ರೂ. ನೋಟಿಗೂ ಬಂತು ಬರ
ಹತ್ತು ಮತ್ತು ಇಪ್ಪತ್ತು ರೂ. ನೋಟುಗಳಿಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದೆ. ಹೋಟೆಲ್, ಅಂಗಡಿ ಮುಂಗಟ್ಟಿನಲ್ಲಿ ಗ್ರಾಹಕರಿಗೆ ಚಿಲ್ಲರೆ ನೀಡಲು ದೊಡ್ಡ ಕೊರತೆ ಎದುರಾಗಿದ್ದು, ವ್ಯಾಪಾರಸ್ಥರು ಪರದಾಡುವಂತಾಗಿದೆ.

ಜಿಲ್ಲೆಯ ಬ್ಯಾಂಕ್‍ಗಳಿಗೂ ಈ ನೋಟುಗಳ ಸರಬರಾಜು ಇಳಿಮುಖವಾಗಿದ್ದು, ನಾಲ್ಕು ತಿಂಗಳಿಗೊಮ್ಮೆ ಆರ್ ಬಿಐನಿಂದ ಬ್ಯಾಂಕ್‍ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ವೇಳೆ ದೊಡ್ಡ ಮೊತ್ತದ ನೋಟುಗಳು ಅಧಿಕ ಸರಬರಾಜಾಗುತ್ತಿವೆ. ನಂತರ ಚಿಕ್ಕ ಮೊತ್ತದ ನೋಟುಗಳು ಸರಬರಾಜಾಗುತ್ತಿವೆ. ಕಳೆದ ದೀಪಾಳಿಯಲ್ಲಿ ಜಿಲ್ಲೆಗೆ 40 ಲಕ್ಷ ರೂ.ನಷ್ಟು ಮೊತ್ತದ ಸಣ್ಣ ಮುಖಬೆಲೆಯ ನೋಟುಗಳು ಪೂರೈಕೆಗೊಂಡಿದ್ದವು. ನಂತರ ಈ ನೋಟುಗಳ ಪೂರೈಕೆಯಾಗಿಲ್ಲ ಎಂಬುದು ಬ್ಯಾಂಕ್ ಮೂಲದ ಮಾಹಿತಿ.

Share This Article
Leave a Comment

Leave a Reply

Your email address will not be published. Required fields are marked *