ಬುಲೆಟ್ ರೈಲು ಯೋಜನೆಗೆ ನಾಳೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ

Public TV
3 Min Read

ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಪನೆ ನಡೆಯಲಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್‍ನಲ್ಲಿ ಅಡಿಗಲ್ಲು ಹಾಕುವ ಮೂಲಕ ಯೋಜನೆಗೆ ಚಾಲನೆ ಸಿಗಲಿದೆ. ಹೀಗಾಗಿ ಈ ಯೋಜನೆಗೆ ಸಂಬಂಧಿಸಿದ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಯೋಜನೆಯ ಪ್ರಮುಖ 12 ಅಂಶಗಳು

1) ಭಾರತದ ಬುಲೆಟ್ ಟ್ರೈನ್ ಯೋಜನೆಗೆ ಸುಮಾರು 1.10 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಯ ಒಟ್ಟು ವೆಚ್ಚದಲ್ಲಿ 88 ಸಾವಿರ ಕೋಟಿ(ಶೇ.81)ಹಣವನ್ನು ಜಪಾನ್ ಸಾಲ ರೂಪದಲ್ಲಿ ಭಾರತಕ್ಕೆ ಒದಗಿಸುತ್ತಿದೆ. ಜಪಾನ್ ಸಾಲವನ್ನು 50 ವರ್ಷದ ಒಳಗಡೆ ಮರು ಪಾವತಿ ಮಾಡಬೇಕಾಗಿದ್ದು, ಈ ಸಾಲಕ್ಕೆ ಶೇ.0.1 ರಷ್ಟು ಬಡ್ಡಿಯನ್ನು ವಿಧಿಸಿದೆ.

2) ಹೊಸ ಬುಲೆಟ್ ಟ್ರೈನ್ ಗುಜರಾತ್‍ನಿಂದ ಮುಂಬೈಗೆ ಸಂಚಾರವನ್ನು ನಡೆಸಲಿದ್ದು, ಒಮ್ಮೆ 750 ಪ್ರಯಾಣಿಕರನ್ನು ಹೊತ್ತು ಸಾಗಲಿದೆ. ಪ್ರತಿ ದಿನ 70 ಬಾರಿ ಅಹಮದಾಬಾದ್ – ಮುಂಬೈ ನಡುವೆ ಈ ರೈಲು ಸಂಚರಿಸಲಿದೆ.

3) ಬುಲೆಟ್ ಟ್ರೈನ್ ಸರಾಸರಿ ಘಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಗರಿಷ್ಟ 350 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

4) ಬುಲೆಟ್ ಟ್ರೈನ್ 508 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದ್ದು, ಶೇ.92 ರಷ್ಟು ಮೇಲ್ಸೇತುವೆ, ಶೇ.6 ರಷ್ಟು ಸುರಂಗ ಹಾಗೂ ಇನ್ನುಳಿದ ಶೇ.2 ರಷ್ಟು ನೆಲದಲ್ಲಿ ಹಾದು ಹೋಗಲಿದೆ. ಅಂದರೆ ಸುಮಾರು 460 ಕಿ.ಮೀ ಮೇಲ್ಸೇತುವೆ ಮಾರ್ಗದಲ್ಲೂ, 27 ಕಿಮೀ ಸುರಂಗ ಮಾರ್ಗದಲ್ಲೂ, ಉಳಿದ 13 ಕಿ.ಮೀ ನೆಲದಲ್ಲಿ ಸಂಚರಿಸಲಿದೆ.

5) ದೇಶದ ಅತೀ ದೊಡ್ಡ ಸುರಂಗ ಮಾರ್ಗವನ್ನು (21 ಕಿ.ಮೀ) ಹೊಂದಿರಲಿದ್ದು, 7 ಕಿ.ಮೀ ಸಮುದ್ರ ಅಡಿಯ ಸುರಂಗದಲ್ಲಿ ಸಂಚರಿಸುವುದು ವಿಶೇಷ. ಒಟ್ಟು 508 ಕಿ.ಮೀ ಮಾರ್ಗದಲ್ಲಿ 351 ಕಿ.ಮೀ ಗುಜರಾತ್ ರಾಜ್ಯದಲ್ಲಿ ಹಾಗೂ 156 ಕಿ.ಮೀ ಮಹಾರಾಷ್ಟ್ರ ರಾಜ್ಯದಲ್ಲಿ ಬುಲೆಟ್ ರೈಲು ಸಂಚರಿಸಲಿದೆ.

6) ದಿನದಲ್ಲಿ 20 ಗಂಟೆಗಳ ಕಾಲ ರೈಲು ಓಡಲಿದ್ದು, ನಾಲ್ಕು ಗಂಟೆಯಲ್ಲಿ ರೈಲನ್ನು ಸ್ವಚ್ಛಗೊಳಿಸಲಾಗುತ್ತದೆ. ಜಪಾನ್ ನಲ್ಲಿ ಕೇವಲ 7 ನಿಮಿಷದಲ್ಲಿ ರೈಲನ್ನು ಸ್ವಚ್ಛಗೊಳಿಸಲಾಗುತ್ತದೆ.

7) ಬುಲೆಟ್ ರೈಲು ಮೊದಲ ಸಂಚಾರವನ್ನು 2022ರ ಆಗಸ್ಟ್ 15 ರಂದು ಆರಂಭಿಸಬೇಕೆಂಬ ಗುರಿಯನ್ನು ರೈಲ್ವೇ ಸಚಿವಾಲಯ ಹಾಕಿಕೊಂಡಿದೆ. ಆರಂಭದಲ್ಲಿ 2023ಕ್ಕೆ ಈ ಯೋಜನೆ ಪೂರ್ಣಗೊಳಿಸಲು ಡೆಡ್‍ಲೈನ್ ನಿಗದಿಗೊಳಿಸಲಾಗಿತ್ತು. ಆದರೆ 2022ರಲ್ಲಿ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಆಚರಿಸುವ ಕಾರಣ ಜನರಿಗೆ ಉಡುಗೊರೆ ಎಂಬಂತೆ ಅವಧಿಗೂ ಮುನ್ನವೇ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.

8) ಮುಂಬೈ – ಅಹಮದಾಬಾದ್ ಮಾರ್ಗವು 12 ನಿಲ್ದಾಣಗಳನ್ನು ಹೊಂದಿರಲಿದೆ. ಎಲ್ಲಾ ನಿಲ್ದಾಣಗಳಲ್ಲಿಯೂ ರೈಲು ನಿಲ್ಲಿಸಿ ಪ್ರಯಾಣ ನಡೆಸಿದರೂ ಕೇವಲ 3 ಘಂಟೆಯಲ್ಲಿ ಕೊನೆಯ ನಿಲ್ದಾಣವನ್ನು ತಲುಪಲಿದೆ. ಸದ್ಯ ಈ ದೂರವನ್ನು ಕ್ರಮಿಸಲು ಸುಮಾರು 8 ಗಂಟೆಯ ಅವಧಿಯನ್ನು ರೈಲು ತೆಗೆದುಕೊಳ್ಳುತ್ತಿದೆ.

9) ಜಪಾನ್ ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

10) ಜಪಾನ್ ಶಿಕಾನ್‍ಸೆನ್ ಬುಲೆಟ್ ರೈಲು 1964ರಲ್ಲಿ ಆರಂಭವಾಗಿದ್ದು, ಈವರೆಗೂ ಒಂದೇ ಒಂದು ಅಪಘಾತವಾಗಿಲ್ಲ. ಈ ರೈಲಿನಲ್ಲಿ ಸೆನ್ಸರ್ ಅಳವಡಿಸಲಾಗಿದ್ದು ಹಳಿಯಲ್ಲಿ ಏನಾದರೂ ಇದ್ದರೆ ಅಥವಾ ಹಳಿ ತುಂಡಾಗಿದ್ದರೆ ಅದರ ಮಾಹಿತಿ ತಿಳಿದು ಸ್ವಯಂ ಚಾಲಿತವಾಗಿ ನಿಲ್ಲುವ ವ್ಯವಸ್ಥೆಯನ್ನು ರೈಲು ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *