ಸೇತುವೆ ಮೇಲಿನಿಂದ ಉರುಳಿ ಕಂದಕಕ್ಕೆ ಬಿದ್ದ ಬಸ್ – 10 ಮಂದಿ ಸಾವು, 55 ಮಂದಿಗೆ ಗಾಯ

Public TV
1 Min Read

ಶ್ರೀನಗರ: ಒಟ್ಟು 75 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ (Jammu Bus Accident) ಸೇತುವೆ ಮೇಲಿನಿಂದ ಉರುಳಿ ಕಂದಕಕ್ಕೆ ಬಿದ್ದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, 55 ಮಂದಿ ಗಾಯಗೊಂಡಿರವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

ಅಪಘಾತಕ್ಕೀಡಾದ ಬಸ್ ಅಮೃತಸರ (Amritsar) ದಿಂದ ಕತ್ರಾಕ್ಕೆ ತೆರಳುತ್ತಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಮೂಲತಃ ಬಿಹಾರ (Bihar) ದವರಾಗಿದ್ದಾರೆ. ಕುಟುಂಬದಲ್ಲಿ ಮಗುವಿಗೆ ‘ಮುಂಡನಾ’ ಕಾರ್ಯಕ್ರಮವಿದ್ದರಿಂದ ಎಲ್ಲಾ ಕುಟುಂಬ ಸದಸ್ಯರು ಮತ್ತು ಆತ್ಮೀಯರು ಸಮಾರಂಭಕ್ಕೆಂದು ಕತ್ರಾಗೆ ತೆರಳಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ವೈಷ್ಣೋದೇವಿ (Vaishno Devi) ದೇಗುಲಕ್ಕೆ ಯಾತ್ರೆಯನ್ನು ಕೈಗೊಂಡಿದ್ದ ಸಂದರ್ಭ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜಜ್ಜರ್ ಕೋಟ್ಲಿ ಬಳಿ ಘಟನೆ ನಡೆದಿದೆ. ರಕ್ಷಣಾ ಕಾರ್ಯಚರಣೆ ಬಹುತೇಕ ಪೂರ್ಣಗೊಂಡಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಮ್ಮುವಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬಸ್‍ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಜನ ಪ್ರಯಾಣಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಮ್ಮು ಎಸ್‍ಎಸ್‍ಪಿ ಚಂದನ್ ಕೋಹ್ಲಿ ತಿಳಿಸಿದ್ದಾರೆ.

ಬಸ್ ಅಮೃತಸರದಿಂದ ಕತ್ರಾದ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದಿರಬಹುದು. ತನಿಖೆ ಬಳಿಕ ಸತ್ಯಾಸತ್ಯತೆಗಳು ಹೊರಬರಲಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಘಟನೆ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಜಮ್ಮುವಿನ ಝಜ್ಜರ್ ಕೋಟ್ಲಿಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಉಂಟಾದ ಜೀವಹಾನಿಯಿಂದ ತೀವ್ರ ನೋವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲಾ ನೆರವು ಮತ್ತು ಚಿಕಿತ್ಸೆ ನೀಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Share This Article