ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ – ಲಾಡ್ V/S ಸಿ.ಟಿ.ರವಿ ವಾಕ್ಸಮರ

Public TV
2 Min Read

ಬೆಂಗಳೂರು: ಕಾಂಗ್ರೆಸ್ (Congreses) ಸರ್ಕಾರದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ಅನ್ನು ಪೂರಕ ಅಂದಾಜಿನಲ್ಲಿ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ರಾಹುಲ್, ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಿದ್ದ ಸಾಧನಾ ಸಮಾವೇಶ ಕಾರ್ಯಕ್ರಮಕ್ಕೆ ಸರ್ಕಾರದ ಹಣ ಏಕೆ ಎಂದು ಬಿಜೆಪಿ ಕ್ಯಾತೆ ತೆಗೆದಿದೆ. ರಾಹುಲ್ ಭಾಗವಹಿಸಿದ ಕಾರ್ಯಕ್ರಮಕ್ಕೆ 10 ಕೋಟಿ ರೂ. ಏಕೆ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕಾಂಗ್ರೆಸ್ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲ, ಡಿಕೆ ಶಿವಕುಮಾರ್ ಅವರೇ ನಮಗೆ ಸಿಎಂ: ಆರ್.ಅಶೋಕ್

ವಿಧಾನಸಭೆಯಲ್ಲಿಂದು ಸಿಎಂ ಸಿದ್ದರಾಮಯ್ಯ ಪರವಾಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು 3,352 ಕೋಟಿ ರೂ. ಹಣವನ್ನು ಪೂರಕ ಅಂದಾಜು ಮಂಡಿಸಿದ್ದಾರೆ. ಇದರಲ್ಲಿ ವಿಜಯನಗರದಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ನೀಡಿರುವುದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ. ಇದೇ ವೇಳೆ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಾಧನೆ ಸೊನ್ನೆ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ. ನಾವು ಖಜಾನೆಗೆ ಮಾಲೀಕರಲ್ಲ, ನಾವು ಖಜಾನೆಯ ಟ್ರಸ್ಟಿ. ಒಂದೊಂದು ರೂಪಾಯಿಯನ್ನೂ ಜನರ ಹಿತಕ್ಕೆ ಬಳಸಬೇಕು. ವಿಜಯನಗರ ಸಮಾವೇಶ ನಿಮ್ಮ ಪಕ್ಷದ ಸಮಾವೇಶ, ಪಕ್ಷದ ಹಣದಲ್ಲಿ ಮಾಡಿ, ಸರ್ಕಾರದ ಹಣ ಏಕೆ? ಜನರ ಹಣ ಏಕೆ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೆ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದು, 1 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಟ್ಟಿದ್ದೇವೆ. ಬಿಜೆಪಿ ಅವರ ಟೀಕೆ ತಳ್ಳಿ ಹಾಕುತ್ತೇವೆ. ರಾಹುಲ್ ಗಾಂಧಿ, ಖರ್ಗೆ ಭಾಗವಹಿಸಿದ ಮಾತ್ರಕ್ಕೆ ಪ್ರಚಾರ ಅಂದ್ರೆ ಹೇಗೆ? ಬೇಟಿ ಬಚಾವ್, ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಹಣ, ಪ್ರಚಾರಕ್ಕೆ ಖರ್ಚು ಮಾಡಿಲ್ಲವಾ ಟಕ್ಕರ್ ಕೊಟ್ಟರು.

ಇನ್ನೂ ಪೂರಕ ಅಂದಾಜಿನಲ್ಲಿ ಕಪಿಲ್ ಸಿಬಲ್ ಮತ್ತು ಇತರೆ ವಕೀಲರ ಸಂಭಾವನೆಗೆ 2.30 ಕೋಟಿ ರೂ. ನೀಡಲಾಗಿದ್ದು, ಯಾವ ಕೇಸ್‌ಗೆ ಸಂಬಂಧಪಟ್ಟಿದ್ದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಮುಡಾ ಪ್ರಕರಣದಲ್ಲಿ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಆ ಕಾರಣಕ್ಕಾಗಿ ಪೂರಕ ಅಂದಾಜಿನಲ್ಲಿರುವ ಸಂಭಾವನೆ ವೆಚ್ಚದ ಉಲ್ಲೇಖ ಕುತೂಹಲ ಮೂಡಿಸಿದೆ.

ಪೂರಕ ಅಂದಾಜಿನಲ್ಲಿ ಏನಿದೆ?
-ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ.
-ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಗೆ 3.69 ಕೋಟಿ ರೂ.
-ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಐಟಿ ಉಪಕರಣಗಳ ಅಳವಡಿಕೆ, ನಿರ್ವಹಣೆಗೆ 50 ಕೋಟಿ ರೂ.
-ಕಪಿಲ್ ಸಿಬಲ್ ಹಾಗೂ ಇತರೆ ವಿಶೇಷ ವಕೀಲರ ಸಂಭಾವನೆಗೆ 2.30 ಕೋಟಿ ರೂ.
-ಕೆ.ಆರ್.ಪುರಂನಲ್ಲಿ ಕೆಎಸ್‌ಆರ್‌ಟಿಸಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಮೀನು ಖರೀದಿಗೆ 47 ಕೋಟಿ ರೂ.
-ಮಂಡ್ಯ ಮೈಷುಗರ್ ಕಾರ್ಖಾನೆಗೆ ಕಬ್ಬು ಅರೆಯಲು 10 ಕೋಟಿ ರೂ.
-ಪರಿಷತ್ ವಿರೋಧ ಪಕ್ಷದ ನಾಯಕ, ಮುಖ್ಯ ಸಚೇತಕರ ಹೊಸ ಕಾರು ಖರೀದಿಗೆ 61 ಲಕ್ಷ ರೂ.
-ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಮೆಡಿಕಲ್ ಬಿಲ್ ಪಾವತಿಗೆ 21 ಲಕ್ಷ ರೂ.
-ಬೆಳಗಾವಿ ಅಧಿವೇಶನದ ಬಾಕಿ ಬಿಲ್ ಪಾವತಿಗೆ 1.72 ಕೋಟಿ ರೂ.ಇದನ್ನೂ ಓದಿ: ಸಿದ್ದರಾಮಯ್ಯ ನಮಗೆ ಸಿಎಂ ಅಲ್ಲ, ನಮಗೆ ಡಿಕೆಶಿಯೇ ಸಿಎಂ: ಅಶೋಕ್‌

Share This Article