31 ಸದಸ್ಯರಲ್ಲಿ ಒಬ್ಬರೇ ಮಹಿಳೆ: ವಿವಾಹ ಮಸೂದೆ ಸಮಿತಿ ಬಗ್ಗೆ ಸಂಸದೆ ಪ್ರಿಯಾಂಕ ಕಳವಳ

Public TV
2 Min Read

ನವದೆಹಲಿ: ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಮಸೂದೆಯನ್ನು ಪರಿಶೀಲಿಸುತ್ತಿರುವ ಸಮಿತಿ ಬಗ್ಗೆ ಮಹಾರಾಷ್ಟ್ರ ಸಂಸದೆ ಪ್ರಿಯಾಂಕಾ ಚತುರ್ವೇದಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಸಂಸದೆ ಪತ್ರ ಬರೆದಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ಮಹತ್ವದ ಮಸೂದೆಯನ್ನು ಚರ್ಚಿಸುತ್ತಿರುವ 31 ಸಂಸದರ ಸಮಿತಿಯಲ್ಲಿ ಒಬ್ಬ ಮಹಿಳಾ ಸದಸ್ಯೆ ಮಾತ್ರ ಇದ್ದಾರೆ. ನಿಜಕ್ಕೂ ಇದು ವಿಷಾದನೀಯ ಸಂಗತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ

ಪತ್ರದಲ್ಲೇನಿದೆ?
ಸಂಸತ್ತಿನ ಸದಸ್ಯೆಯಾಗಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ದೇಶದ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರುವಂತಹ ನಿರ್ಣಾಯಕ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಯಿತು. ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಕರು ಮತ್ತು ಕ್ರೀಡಾ ಇಲಾಖೆಯವರನ್ನು ಒಳಗೊಂಡ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ. ಆದರೆ ಈ ಸಮಿತಿಯಲ್ಲಿ ಒಬ್ಬ ಮಹಿಳಾ ಸದಸ್ಯೆ ಮಾತ್ರ ಇದ್ದಾರೆ.

ಮಹಿಳೆಯರು ಮತ್ತು ಭಾರತೀಯ ಸಮಾಜಕ್ಕೆ ಸಂಬಂಧಿಸಿದ ಮಸೂದೆ ಇದಾಗಿದೆ. ಆದರೆ ಸಮಿತಿಯಲ್ಲಿ ಒಬ್ಬರೇ ಮಹಿಳಾ ಸದಸ್ಯೆ ಇರುವುದು ನಿರಾಶಾದಾಯಕವಾಗಿದೆ. ಈ ಸಮಿತಿಯಲ್ಲಿ ಹೆಚ್ಚಿನ ಮಹಿಳಾ ಸದಸ್ಯರು ಇರಬೇಕು. ಆಗ ಮಾತ್ರ ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಸೂದೆ ಸುತ್ತ ಗಂಭೀರ ಚರ್ಚೆಯಾಗುತ್ತದೆ. ಸಮಿತಿಯಲ್ಲಿ ಮಹಿಳೆಯರ ಧ್ವನಿ ಪ್ರತಿಧ್ವನಿಸಿ ಅರ್ಥಪೂರ್ಣವಾಗುತ್ತದೆ. ಇದನ್ನು ತಾವು ಗಣನೆಗೆ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಸಂಸದೆ ಚತುರ್ವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್ – ಪ್ರಜಾಪ್ರಭುತ್ವದ ಕೊಲೆ ಎಂದ ಜೆ.ಪಿ.ನಡ್ಡಾ

ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿರುವ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ನಾನೊಬ್ಬಳೇ ಏಕೈಕ ಮಹಿಳಾ ಸದಸ್ಯೆ ಎಂದು ತಿಳಿದು ಆಶ್ಚರ್ಯವಾಯಿತು. ಅಲ್ಲಿ ಲಿಂಗ ಅಸಮತೋಲನವಿದೆ. ಮಸೂದೆಗೆ ಅಭಿಪ್ರಾಯಗಳು ಮುಖ್ಯ. ಈ ಹಿನ್ನೆಲೆಯಲ್ಲಿ ಮಹಿಳಾ ಮುಖಂಡರು, ಮಹಿಳಾ ಸಂಸದರು ತಮ್ಮ ಸಲಹೆ, ಅಭಿಪ್ರಾಯಗಳನ್ನು ಸಮಿತಿಯ ಅಧ್ಯಕ್ಷರಿಗೆ ನೀಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *