KRSನಿಂದ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ – ಕಾವೇರಿ ಕೊಳ್ಳದಲ್ಲಿ ಪ್ರವಾಹ

Public TV
2 Min Read

ಮಂಡ್ಯ: ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದ್ದು, ಡ್ಯಾಂನಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕಾವೇರಿ ಭೋರ್ಗರೆತವಾಗಿ ಹರಿಯುತ್ತಿದ್ದು, ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಸಂಕಷ್ಟ ಎದುರಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹಳೇ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದೆ. ಇನ್ನೂ ಡ್ಯಾಂನಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇದರಿಂದ ಕನ್ನಡನಾಡಿನ ಜೀವನದಿ ಕಾವೇರಿ ಮೈದುಂಬಿ ಭೋರ್ಗರೆತವಾಗಿ ಹರಿಯುತ್ತಿದ್ದಾಳೆ. ಕಾವೇರಿ ಪ್ರವಾಹದ ಆತಂಕವನ್ನು ತಂದಿದೆ. ಇದರಿಂದ ಕಾವೇರಿ ಕೊಳ್ಳದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಕೆಆರ್‌ಎಸ್ ಡ್ಯಾಂನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಬಿಟ್ಟಿರುವ ಪರಿಣಾಮ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಹಲವು ಘಟನೆಗಳು ಜರುಗಿವೆ. ಒಂದು ಕಡೆ ಕಾವೇರಿ ನದಿ ಪಕ್ಕದ ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡು ಅಲ್ಲಿನ ಬೆಳೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ, ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ಹಿನ್ನೆಲೆ ನದಿಗೆ ಇಳಿಯಲು ಭಕ್ತರಿಗೆ ನಿಷೇಧ ಹೇರಲಾಗಿದೆ. ಶ್ರೀರಂಗಪಟ್ಟಣ ಕೋಟೆ ಗಣಪತಿ ದೇವಸ್ಥಾನ ಕಾವೇರಿ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದು, ವಿಘ್ನೇಶ್ವರನಿಗೆ ಪೂಜೆ ಇಲ್ಲದ ಹಾಗೆ ಆಗಿದೆ.

ಸುಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಕಂಟಕ ಎದುರಾಗಿದೆ. ಅಪಾರ ಪ್ರಮಾಣದ ನೀರು ಬರುತ್ತಿರುವ ಹಿನ್ನೆಲೆ ರಂಗನತಿಟ್ಟಿನ 25 ನಡುಗಡ್ಡೆಗಳ ಪೈಕಿ ಬಹುತೇಕ ನಡುಗಡ್ಡೆಗಳು ಮುಳುಗಡೆಯಾಗಿವೆ. ಇದರಿಂದ ಇಲ್ಲಿನ ಪಕ್ಷಿ ಸಂಕುಲಗಳು ತಮ್ಮ ಗೂಡು, ಮೊಟ್ಟೆ, ಮರಿಗಳ ರಕ್ಷಣೆಗೆ ಪರದಾಡುತ್ತಿವೆ. ಇದಲ್ಲದೇ ರಂಗನತಿಟ್ಟಿನ ವಾಕಿಂಗ್ ಪಾಥ್‌ ಸಹ ನೀರಿನಲ್ಲಿ ಮುಳುಗಡೆಯಾಗಿದೆ.

ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹದಿಂದ ಆಗಿರುವ ಸಮಸ್ಯೆಗಳ ಸ್ಥಳಕ್ಕೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಡಿಸಿ ಡಾ.ಕುಮಾರ, ಜಿಪಂ ಸಿಇಓ ತನ್ವೀರ್ ಸೇಠ್ ಆಸೀಫ್ ಭೇಟಿ ನೀಡಿದರು. ಮುಂದೆ 1.50 ಲಕ್ಷ ಕ್ಯುಸೆಕ್ ನೀರು ಬಿಟ್ಟರೆ ಮುಂದೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜೊತೆಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಚಿಂತನೆ ಮಾಡಲಾಯಿತು. ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿಯಿಂದ ಪ್ರವಾಹದ ಸಮಸ್ಯೆಯನ್ನು ಕಾವೇರಿ ಕೊಳ್ಳದ ಜನರು ಎದುರಿಸುತ್ತಿದ್ದಾರೆ.

Share This Article