ವರಮಹಾಲಕ್ಷ್ಮಿ ಹಬ್ಬಕ್ಕೆ ಬ್ಯಾಂಕ್ ಲಾಕರ್‌ನಿಂದ ತಂದಿದ್ದ 1 ಕೆಜಿ ಚಿನ್ನ, 15 ಲಕ್ಷ ನಗದು ಕಳ್ಳರ ಪಾಲು!

By
2 Min Read
  • ಹಳೇಬೀಡಲ್ಲಿ ಚಿನ್ನಾಭರಣದೋಚಿದ ಕಳ್ಳರು

ಹಾಸನ: ನಗರದ (Hassan) ಖಾಸಗಿ ಬ್ಯಾಂಕ್‍ನ ನೌಕರರೊಬ್ಬರ ಮನೆಯಲ್ಲಿ 1 ಕೆಜಿ ಚಿನ್ನ (Gold) ಹಾಗೂ 15 ಲಕ್ಷಕ್ಕೂ ಹೆಚ್ಚಿನ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ.

ಸದಾಶಿವನಗರದ ನವೀನ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆಂದು ಬ್ಯಾಂಕ್ ಲಾಕರ್‌ನಿಂದ ತಂದಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ ಆಭರಣ ಹಾಗೂ 15 ಲಕ್ಷಕ್ಕೂ ಹೆಚ್ಚಿನ ನಗದನ್ನು ಕಳ್ಳರು ದೋಚಿದ್ದಾರೆ. ಗುರುವಾರ ರಾತ್ರಿ ನವೀನ್ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದರು. ಶನಿವಾರ (ಆ.23) ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ ಕಿರುಕುಳ ಆರೋಪ – ಗೃಹಿಣಿ ಆತ್ಮಹತ್ಯೆ

ನವೀನ್ ಈಗ ವಾಸವಿದ್ದ ಮನೆ ಎದುರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಮನೆ ನಿರ್ಮಾಣಕ್ಕಾಗಿ ಹಣ ಹೊಂದಿಸಿಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

3.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಮತ್ತೊಂದು ಪ್ರಕರಣದಲ್ಲಿ ಮನೆಯ ಬಾಗಿಲು ಮುರಿದು ಸುಮಾರು 3.50 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ ಹಾಗೂ 5,000 ರೂ. ನಗದು ದೋಚಿರುವ ಘಟನೆ ಬೇಲೂರು ತಾಲೂಕಿನ ಹಳೇಬೀಡಿನ ಕಲ್ಲುಮಠ ಬೀದಿಯಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಮಂಜಪ್ಪ ಮತ್ತು ಪತ್ನಿ ಪ್ರೇಮಲೀಲಾ ಅವರು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಜಾವಗಲ್ ಸರ್ಕಲ್‍ನಲ್ಲಿರುವ ತಾವು ನಡೆಸುತ್ತಿರುವ ಮೆಡಿಕಲ್‌ಗೆ ಹೋಗಿದ್ದರು. ಈ ವೇಳೆ ಈ ಕಳ್ಳತನ ನಡೆದಿದೆ.

ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಾಗ, ಮನೆಯ ಬಾಗಿಲನ್ನು ಕಳ್ಳರು ಒಡೆದು, ಬೀರುಗಳಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರ, 3 ಗ್ರಾಂ. ತೂಕದ ಗುಂಡಿನ ಚೈನ್, 10 ಗ್ರಾಂ. ತೂಕದ ಬೆಳ್ಳಿಯ ಪೆಂಡೆಂಟ್, 2 ಉಂಗುರ, 6 ಗ್ರಾಂ. ತೂಕದ 1 ಮೂಗುತಿ ಹಾಗೂ ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Nelamangala | 16 ವರ್ಷದ ಬಾಲಕಿ ನೇಣಿಗೆ ಶರಣು

Share This Article