ದೀಪಾವಳಿ ಹಬ್ಬಕ್ಕೆ ಸಾಗಿಸುತ್ತಿದ್ದ ‘ಈರುಳ್ಳಿ ಬಾಂಬ್’‌ ಸ್ಫೋಟಗೊಂಡು ಓರ್ವ ಸಾವು

Public TV
1 Min Read

ಅಮರಾವತಿ: ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ದೀಪಾವಳಿ ಹಬ್ಬದ ವಿಶೇಷ ಪಟಾಕಿ-ಆನಿಯನ್ ಬಾಂಬ್‌ಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯ ದೇವಸ್ಥಾನದ ಬಳಿಯ ಗುಂಡಿಗೆ‌ ಬೈಕ್‌ ಬಿಟ್ಟಿದ್ದಾರೆ. ಈ ವೇಳೆ ಬಾಂಬ್‌ಗಳು ಕೆಳಕ್ಕೆ ಬಿದ್ದು ಸ್ಫೋಟಗೊಂಡಿವೆ.

ದೀಪಾವಳಿ ಹಿನ್ನೆಲೆ ಸಾಗಿಸುತ್ತಿದ್ದ ಬಾಂಬ್‌ಗಳು IED ಅಥವಾ ಸುಧಾರಿತ ಸ್ಫೋಟಕ ಸಾಧನದಂತೆಯೇ ಅದೇ ಸ್ಫೋಟಕ ಸಾಮರ್ಥ್ಯವನ್ನು ಹೊಂದಿತ್ತು. ದುರಂತದ ಸಿಸಿಟಿವಿ ದೃಶ್ಯಾವಳಿಯು, ಬಿಳಿ ಸ್ಕೂಟರ್‌ನಲ್ಲಿ ಇಬ್ಬರು ಪುರುಷರು ಕಿರಿದಾದ ರಸ್ತೆಯ ಮೂಲಕ ವೇಗದಲ್ಲಿ ಚಾಲನೆ ಮಾಡುವುದನ್ನು ತೋರಿಸಿದೆ. ರಸ್ತೆ ಅಗಲೀಕರಣಗೊಂಡು ಮುಖ್ಯರಸ್ತೆ ಸಂಧಿಸುವ ಹಂತಕ್ಕೆ ಬರುತ್ತಿದ್ದಂತೆ ಬೈಕ್ ಸ್ಫೋಟಗೊಂಡಿದೆ. ಜಂಕ್ಷನ್‌ನಲ್ಲಿ ಐದರಿಂದ ಆರು ಮಂದಿಯ ಸಣ್ಣ ಗುಂಪು ಇತ್ತು.

ಸ್ಫೋಟದ ತೀವ್ರತೆಗೆ ಇಡೀ ಪ್ರದೇಶವು ಗಾಢ ಬೂದು ಹೊಗೆಯಿಂದ ಆವೃತವಾಗಿತ್ತು. ಸ್ಫೋಟದಿಂದ ಹೇಗೋ ಬದುಕುಳಿದ ಇಬ್ಬರು, ಸುರಕ್ಷಿತವಾಗಿ ಓಡಿ ಬಂದರು. ಬೈಕಿನ ಭಾಗಗಳು ಮತ್ತು ಮೃತನ ದೇಹದ ಭಾಗಗಳು ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಕಂಡುಬಂದಿದೆ.

ಬೈಕ್ ಸವಾರನನ್ನು ಸುಧಾಕರ್ ಎಂದು ಗುರುತಿಸಲಾಗಿದೆ. ಆರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share This Article