‘ಹೋರಾಟ ಮಾಡಲೆಂದೇ ಜನಿಸಿದವರು – ಬಾವಲಿಗಳಲ್ಲ, ಇವರು ಬ್ಯಾಟ್‍ಮನ್‍ಗಳುʼ

Public TV
2 Min Read

– ಭಾರತೀಯ ಸೇನೆಯಿಂದ ಬಿಹಾರ ರೆಜಿಮೆಂಟ್‌ಗೆ ಗೌರವ
– ಸೋಮವಾರದ ಬಳಿಕ ಮಂಗಳವಾರ ಬಂದೇ ಬರುತ್ತದೆ

ನವದೆಹಲಿ: ಲಡಾಕ್‍ನಲ್ಲಿರುವ ಎಲ್‍ಎಸಿ(ವಾಸ್ತವ ಗಡಿ ರೇಖೆ)ಗಡಿಯಲ್ಲಿ ಚೀನಾ ಸೈನಿಕರಿಗೆ ಪಾಠ ಕಲಿಸಿದ ಬಿಹಾರ ರೆಜಿಮೆಂಟ್‍ ಸೈನಿಕರಿಗೆ ಭಾರತೀಯ ಸೇನೆಯ ಉತ್ತರ ಕಮಾಂಡ್ ವಿಡಿಯೋ ಮೂಲಕ ವಿಶೇಷ ಗೌರವ ಸಲ್ಲಿಸಿದೆ.

“ಇವರು ಧ್ರುವ ವಾರಿಯರ್ಸ್. ಬಿಹಾರ ರೆಜಿಮೆಂಟ್‍ನ ಸಿಂಹಗಳು. ಹೋರಾಟ ಮಾಡಲೆಂದು ಜನಿಸಿದವರು. ಇವರು ಬಾವಲಿಗಳಲ್ಲ. ಇವರು ಬ್ಯಾಟ್‍ಮನ್‍ಗಳು. ಪ್ರತಿ ಸೋಮವಾರದ ಬಳಿಕ ಮಂಗಳವಾರ ಬಂದೇ ಬರುತ್ತದೆ. ಭಜರಂಗಿ ಬಲಿ ಕೀ ಜೈ” ಎಂದು ಬರೆದು 1 ನಿಮಿಷ 57 ಸೆಕೆಂಡಿನ ವಿಡಿಯೋವನ್ನು ಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ ಚೀನಾ ಸೈನಿಕರಿಗೆ ದಿಟ್ಟವನ್ನು ತಿರುಗೇಟು ನೀಡಿದ ಕರ್ನಲ್ ಸಂತೋಷ್ ಬಾಬು ಅವರ ಚಿತ್ರವನ್ನು ಸೇರಿಸಿ ಗೌರವ ಸಲ್ಲಿಸಿದೆ.

ವಿಡಿಯೋದಲ್ಲಿ ಏನಿದೆ?
ಸ್ನೇಹಿತರೇ, ಭಾರತೀಯರೇ ನಾನು ಬಿಹಾರ ರೆಜಿಮೆಂಟ್‍ ಸೈನಿಕರಿಗೆ ಸೆಲ್ಯೂಟ್ ಹೊಡೆಯುತ್ತೇನೆ. 21 ವರ್ಷದ ಹಿಂದೆ ಈ ತಿಂಗಳಿನಲ್ಲಿ ಬಿಹಾರ ಸೈನಿಕರು ಕಾರ್ಗಿಲ್‍ನಲ್ಲಿ ನುಗ್ಗಿದವರಿಗೆ ತಕ್ಕ ಪಾಠ ಕಲಿಸಿದ್ದರು. ಬಹಳ ಎತ್ತರದಲ್ಲಿದ್ದರೂ ಧೈರ್ಯದಿಂದ ಮುನ್ನುಗ್ಗಿ ಶ್ರಮಪಟ್ಟು ಹೋರಾಡಿ ವಿಜಯ ತಂದಿದ್ದಾರೆ. ಇದು ಹೇಗಾಯ್ತು ಗೊತ್ತಾ? ಯುದ್ಧದ ವೇಳೆ ನಾಯಿ ಗಾತ್ರ ಹೇಗಿದೆ ಎನ್ನುವುದು ಮುಖ್ಯವಲ್ಲ. ಯುದ್ಧದಲ್ಲಿ ನಾಯಿ ಹೇಗೆ ಹೋರಾಡುತ್ತದೆ ಎನ್ನುವುದು ಮುಖ್ಯ. ಒಂದು ಬಾರಿ ನಿಮಗೆ ಕರಡಿ ಸಿಗಬಹುದು, ಇನ್ನೊಂದು ಬಾರಿ ಕರಡಿಗೆ ನೀವು ಸಿಗಬಹುದು. ಆದರೆ ಪ್ರತಿ ಸೋಮವಾರದ ಬಳಿಕ ಮಂಗಳವಾರ ಬಂದೇ ಬರುತ್ತದೆ.

1857, 1948, 1971 ಮತ್ತು 1999 ಇರಲಿ. ಇವರು ಹೋರಾಟ ಮಾಡಲೆಂದು ಜನಿಸಿದವರು. ಇವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಇವರು ಬಾವಲಿಗಳಲ್ಲ. ಇವರು ಬ್ಯಾಟ್‍ಮನ್‍ಗಳು ಎಂದು ಫೋಟೋಗಳ ಜೊತೆ ಹಿನ್ನೆಲೆ ಧ್ವನಿ ನೀಡಲಾಗಿದೆ. ಇದರ ಜೊತೆ ಕೊನೆಯಲ್ಲಿ ಬಿಹಾರ್ ರೆಜಿಮೆಂಟ್‍ ಹಾಡನ್ನು ಹಾಕಲಾಗಿದೆ.

ಮೇಜರ್‌ ಅಖಿಲ್‌ ಅವರು ಹಿನ್ನೆಲೆ ಧ್ವನಿ ನೀಡಿದ ವಿಡಿಯೋ ಭಾನುವಾರ ರಾತ್ರಿ 9:45ಕ್ಕೆ ಈ ವಿಡಿಯೋ ಅಪ್ಲೋಡ್ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. 6 ಸಾವಿರಕ್ಕೂ ಹೆಚ್ಚು ಮಂದಿ ರೀ ಟ್ವೀಟ್ ಮಾಡಿದ್ದರೆ 14 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ವಿಶೇಷ ಏನೆಂದರೆ ಕಳೆದ ಸೋಮವಾರ ರಾತ್ರಿಯ ವೇಳೆ ಗಲ್ವಾನ್‌ ನದಿ ಕಣಿವೆಯಲ್ಲಿ ಭಾರತೀಯ ಸೇನೆ ಚೀನಾದವರು ಹಾಕಿದ್ದ ಅಕ್ರಮ ಟೆಂಟ್‌ಗಳನ್ನು ಕಿತ್ತು ಹಾಕಿ ಬಿಸಿ ಮುಟ್ಟಿಸಿತ್ತು. ಕಾರ್ಗಿಲ್‌ ಯುದ್ಧದ ವೇಳೆಯೂ ಬಿಹಾರ ರೆಜಿಮೆಂಟ್‌ ಪಾತ್ರ ಮುಖ್ಯವಾಗಿತ್ತು. ಭಾರತದ ಇತಿಹಾಸದಲ್ಲಿ ನಡೆದ ಎಲ್ಲ ಯುದ್ಧದಲ್ಲೂ ಬಿಹಾರ ರೆಜಿಮೆಂಟ್‌ ಮುನ್ನುಗ್ಗಿ ಹೋರಾಟ ಮಾಡಿಕೊಂಡೇ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *