ಹೋಮ್ ಮಿನಿಸ್ಟರ್ ತವರಲ್ಲೇ ಐಪಿಎಸ್ ಅಧಿಕಾರಿಗಳ ವಾರ್

Public TV
2 Min Read

ಧಾರವಾಡ/ಹುಬ್ಬಳ್ಳಿ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತವರೂರಿನಲ್ಲೇ ಐಪಿಎಸ್ ಅಧಿಕಾರಗಳ ವಾರ್ ತಾರಕಕ್ಕೇರಿದೆ. ಹುಬ್ಬಳ್ಳಿ-ಧಾರವಾಡ ಕಮೀಷನರ್ ಆರ್ ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ್ ಮಧ್ಯೆ ಜಗಳ ಶುರುವಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳ ತಿಕ್ಕಾಟ ಇದೀಗ ಪೊಲೀಸ್ ಮಹಾನಿರ್ದೇಶಕರವರೆಗೂ ತಲುಪಿದೆ.

ಹುಬ್ಬಳ್ಳಿ ಧಾರವಾಡ ಪೊಲೀಸ ಕಮೀಷನರ್ ಆರ್.ದಿಲೀಪ್ ಇಲಾಖೆಯ ವಿಚಾರಗಳು, ಅಕ್ರಮ ಚಟುವಟಿಕೆ, ಕೋವಿಡ್ 19 ವಿಚಾರದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸುವ ವಿಚಾರ ಹಾಗೂ ಸಾಮಾಜಿಕ ಅಂತರ ಕಾಪಾಡುವ ವಿಚಾರದ ಬಗ್ಗೆ ಚರ್ಚೆ ಮಾಡಲು ಅನುಮತಿ ನೀಡುತ್ತಿಲ್ಲವೆಂದು ಡಿಸಿಪಿ ಕೃಷ್ಣಕಾಂತ್ ಆರೋಪಿಸಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಡಿಸಿಪಿ ಆಗಿರುವ ತಾವೂ ಆಯುಕ್ತರನ್ನ ಭೇಟಿ ಮಾಡಲು ಇಂಟರಕಾಮ್ ಫೋನ್ ಮೂಲಕ ಸಂಪರ್ಕ ಮಾಡಿದರೂ ಭೇಟಿಗೆ ಅವಕಾಶ ನೀಡುತ್ತಿಲ್ಲ. 2,230 ಗಂಟೆಗಳ ಕಾಲ ಆಯುಕ್ತರ ಭೇಟಿಗೆ ಕಾಯ್ದರು ಅವಕಾಶ ನೀಡದ ಪರಿಣಾಮ ತಾವೂ ಕಂಟ್ರೋಲ್ ರೂಂ ಮೂಲಕ ಪತ್ರ ಸಲ್ಲಿಸಿರುವುದಾಗಿ ಕೃಷ್ಣಕಾಂತ್ ಹೇಳಿದ್ದಾರೆ. ಅಲ್ಲದೇ ಪತ್ರದ ಪ್ರತಿಯನ್ನ ಪೊಲೀಸ ಮಹಾನಿರ್ದೇಶಕರಿಗೂ ಕಳುಹಿಸಿದ್ದಾರೆ.

ಪೊಲೀಸ್ ಆಯುಕ್ತ ಆರ್ ದಿಲೀಪ್, ಈ ಹಿಂದೆಯೂ ಡಿಸಿಪಿ ಹಾಗೂ ಎಸಿಪಿಗಳ ಜೊತೆಗೆ ಇದೇ ರೀತಿಯಲ್ಲಿ ಜಗಳ ಮಾಡಿಕೊಂಡಿದ್ದರು. ಇದೀಗ ಡಿಸಿಪಿಯೊಂದಿಗೆ ಮತ್ತೊಮ್ಮೆ ಜಗಳ ಮಾಡಿಕೊಂಡಿರುವುದು ಜಗಜ್ಹಾಹೀರ್ ಆಗಿರುವುದು ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳಿಗೆ ಎಡೆ ಮಾಡಿಕೊಟ್ಟಿದೆ.

ಪೊಲೀಸ್ ಕಮೀಷನರ್ ಆರ್ ದಿಲೀಪ್ ಕಚೇರಿ ಬಿಟ್ಟು  ಫೀಲ್ಡ್ ಗೆ ಬರದೇ ಕಾರ್ಯನಿರ್ವಹಿಸಿರುವ ವಿಚಾರವಾಗಿ ಈ ಹಿಂದೆ ಸ್ವತಃ ಗೃಹ ಸಚಿವರೇ ಆಯುಕ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಗೃಹ ಸಚಿವರ ಎಚ್ಚರಿಕೆಯ ನಂತರವೂ ಆಯುಕ್ತರು ಹಾಗೂ ಡಿಸಿಪಿ ಜಗಳ ತಾರಕಕ್ಕೇರಿರುವುದು ಪೊಲೀಸ್ ಇಲಾಖೆಯ ಒಳ ಹುಳಕುಗಳನ್ನ ಹೊರ ಹಾಕಿದಂತಾಗಿದೆ.

ಪೊಲೀಸ್ ಇಲಾಖೆಯಲ್ಲಿನ ಒಂದು ಅನುದಾನದ ವಿಚಾರವಾಗಿ ಈ ಒಳಜಗಳ ಆರಂಭವಾಗಿದ್ದು. ಡಿಸಿಪಿಯೊಂದಿಗೆ ಚರ್ಚೆ ಮಾಡದೇ ಪೊಲೀಸ್ ಕಮೀಷನರ್ ಆರ್ ದಿಲೀಪ್ ಎಕಾಎಕಿ ತೀರ್ಮಾನ ಕೈಗೊಳ್ಳಲು ಮುಂದಾಗಿರುವುದೇ ಐಪಿಎಸ್ ಅಧಿಕಾರಿಗಳ ಒಳಜಗಳಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಈ ಇಬ್ಬರು ಐಪಿಎಸ್ ಅಧಿಕಾರಿಗಳ ಒಳಜಗಳವನ್ನ ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರು ಹೇಗೆ ಬಗೆಹರಿಸ್ತಾರೆ ಅನ್ನೋದು ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *