ಟೈಟಲ್ ನಿಂದಲೇ ಕ್ಯೂರಿಯಾಸಿಟಿ ಹುಟ್ಟು ಹಾಕುವ ಮೂಲಕ ಹೊಸಬರ ಸಿನಿಮಾವೊಂದು ಸಖತ್ ಸೌಂಡ್ ಮಾಡುತ್ತಿದೆ. ಹೊಸತಂಡದ ವಿನೂತನ ಪ್ರಯೋಗವಿರುವ ಈ ಚಿತ್ರದ ಹೆಸರು ‘ಕ್ಯಾನ್ಸೀಲಿಯಂ’. ಇದೊಂದು ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿದ ಸೈನ್ಸ್ ಫಿಕ್ಷನ್ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಒಳಗೊಂಡಿರುವ ಸಿನಿಮಾ.
2018ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಚಿತ್ರೀಕರಣವನ್ನೆಲ್ಲ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಚಿತ್ರದ ಅಂತಿಮ ಹಂತದ ಕೆಲಸದಲ್ಲಿರುವಾಗಲೇ ಸಿನಿಮಾ ಬಗ್ಗೆ ಒಂದಿಷ್ಟು ವಿಷಯಗಳನ್ನು ಚಿತ್ರತಂಡ ಹಂಚಿಕೊಂಡಿದೆ. ‘ಕಾನ್ಸೀಲಿಯಂ’ ಒಂದು ಲ್ಯಾಟಿನ್ ಪದ. ಇದಕ್ಕೆ ಪ್ಲ್ಯಾನ್, ಸಲಹೆ, ಉದ್ದೇಶ ಮುಂತಾದ ಒಂದಷ್ಟು ಅರ್ಥಗಳು ಇದೆ ಅನ್ನೋದು ಚಿತ್ರತಂಡ ನೀಡುವ ಉತ್ತರ. ಈ ಚಿತ್ರ ಹೊಸ ಪ್ರತಿಭೆ ಸಮರ್ಥ್ ನಿರ್ದೇಶನದ ಚೊಚ್ಚಲ ಸಿನಿಮಾ. ಕಿರು ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ಸಮರ್ಥ್ ಇದೀಗ ಮೊದಲ ಸಿನಿಮಾವಾಗಿ ‘ಕ್ಯಾನ್ಸೀಲಿಯಂ’ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಚಿತ್ರರಂಗದಲ್ಲಿ ಒಂದಷ್ಟು ವರ್ಷಗಳ ಅನುಭವ ಹೊಂದಿರುವ ಸಮರ್ಥ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆ ನಾಯಕ ನಟನಾಗಿಯೂ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಒಂದು ಪಾತ್ರಕ್ಕೆ ನಿರ್ದೇಶಕ ಸಮರ್ಥ್ ಬಣ್ಣ ಹಚ್ಚಿದ್ರೆ ಮತ್ತೊಂದು ಪಾತ್ರದಲ್ಲಿ ನವ ನಟ ಪ್ರೀತಂ ಅಭಿನಯಿಸಿದ್ದಾರೆ. ನಾಯಕಿಯರಾಗಿ ಮನೆದೇವ್ರು ಧಾರಾವಾಹಿ ಖ್ಯಾತಿಯ ನಟಿ ಅರ್ಚನಾ ಲಕ್ಷೀನರಸಿಂಹಸ್ವಾಮಿ ಹಾಗೂ ಖುಷಿ ಆಚಾರ್ ಚಿತ್ರದಲ್ಲಿ ಮಿಂಚಿದ್ದಾರೆ.
ಚಿತ್ರಕ್ಕೆ ದ್ವೈಪಾಯಣ ಸಿಂಘ ಸಂಗೀತ ನಿರ್ದೇಶನ ಹಾಗೂ ಸುದರ್ಶನ್ ಅವರ ಛಾಯಾಗ್ರಹಣವಿದೆ. ಕನ್ನಡ ಮಾತ್ರವಲ್ಲದೆ ಏಕಕಾಲದಲ್ಲಿ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಸೀತಾರಾಮ ಶಾಸ್ತ್ರೀ ಪ್ರೊಡಕ್ಷನ್ ಅಡಿಯಲ್ಲಿ ‘ಕ್ಯಾನ್ಸೀಲಿಯಂ’ ಚಿತ್ರ ನಿರ್ಮಾಣವಾಗಿದ್ದು ಸದ್ಯದಲ್ಲೇ ಇನ್ನಷ್ಟು ಮಾಹಿತಿಗಳನ್ನು ಚಿತ್ರತಂಡ ನೀಡಲಿದೆ.