ಹೊಳೆ ಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ

Public TV
1 Min Read

ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ಖಾನಾಪುರ ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಘಟಪ್ರಭಾ ನದಿಯಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಜಲದಿಗ್ಬಂಧನ ಎದುರಿಸುವಂತಾಗಿದೆ.

ಒಳಹರಿವಿನ ಪ್ರಮಾಣ ಹೆಚ್ಚಾದ ಪರಿಣಾಮದಿಂದಾಗಿ ಭಕ್ತರಿಗೆ ದೇವರ ಪೂಜೆ ದರ್ಶನ ಭಾಗ್ಯ ಇಲ್ಲದಂತಾಗಿದ್ದು, ದೇಗುಲದ ಮುಂಭಾಗದ ಮೆಟ್ಟಿಲು, ಕಟ್ಟೆಯವರೆಗೆ ಎರಡು ಅಡಿಯಷ್ಟು ನೀರು ನಿಂತಿದೆ. ಇದೇ ರೀತಿ ನೀರಿನ ಪ್ರಮಾಣ ಹೆಚ್ಚಾದರೆ ಇನ್ನೂ ಮೂರ್ನಾಲ್ಕು ದಿನಗಳಲ್ಲಿ ದೇವಸ್ಥಾನ ಸಂಪೂರ್ಣ ಜಲಾವೃತವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

ಹಿಡಕಲ್ ಜಲಾಶಯದ ನೀರಿನ ಮಟ್ಟ (ಒಳ ಹರಿವು) 17 ಸಾವಿರ ಕ್ಯೂಸೆಕ್ ಇದ್ದು, ಹೊರ ಹರಿವನ್ನು ನಿಲ್ಲಿಸಲಾಗಿದೆ. ಆದರೂ ಕೂಡ ಬರೀ ಮಳೆಯ ನೀರಿನಿಂದಲೇ ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿರುವುದು ನದಿ ದಡದ ಜನರಲ್ಲಿ ಆತಂಕ ಮೂಡಿಸಿದೆ.

ಹೊಳೆ ಬಸವೇಶ್ವರ ದೇವಸ್ಥಾನ ನದಿ ದಡದಲ್ಲೇ ಇರುವುದರಿಂದಾಗಿ ಘಟಪ್ರಭಾಗೆ ನೀರು ಹರಿವು ಹೆಚ್ಚಾಗುತ್ತಿದ್ದಂತೆ, ಪ್ರತೀ ವರ್ಷವೂ ಈ ದೇವಸ್ಥಾನ ಜಲದಿಗ್ಬಂಧನ ಎದುರಿಸುತ್ತಿದೆ. ಇದೀಗ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇಲ್ಲವಾದರೂ ಮುಂದೆ ಹಿಡಕಲ್ ಜಲಾಶಯದಿಂದ 50 ಸಾವಿರ ಕ್ಯೂಸೆಕ್‍ನಷ್ಟು ನೀರು ಘಟಪ್ರಭಾಗೆ ಹರಿದು ಬಂದಾಗ, ಮುಧೋಳ ತಾಲೂಕಿನ ಹಲವು ಗ್ರಾಮಗಳಿಗೆ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *