ಹೊರ ರಾಜ್ಯ, ಜಿಲ್ಲೆಯಿಂದ ಬಂದ್ರೆ 10 ಸಾವಿರ ದಂಡ, ಬಂದವರನ್ನು ಹಿಡಿದು ಕೊಟ್ರೆ 2 ಸಾವಿರ ಬಹುಮಾನ

Public TV
2 Min Read

– ಗ್ರಾಮಸ್ಥರಿಂದ ಡಂಗೂರ ಸಾರುವ ಮೂಲಕ ಎಚ್ಚರಿಕೆ
– ಬೆಂಗಳೂರಿಂದ ಬಂದವರು ಸ್ವಯಂ ತಪಾಸಣೆಗೆ ಒಳಗಾಗದಿದ್ರೆ, ಕಾನೂನು ಕ್ರಮ

ಚಾಮರಾಜನಗರ: ಕೊರೊನಾ ನಿಯಂತ್ರಣಕ್ಕೆ ಗ್ರಾಮಗಳೇ ಕ್ರಮ ಕೈಗೊಳ್ಳುತ್ತಿದ್ದು, ಹೊರ ರಾಜ್ಯ, ಜಿಲ್ಲೆಗಳಿಂದ ಯಾರಾದರೂ ಗ್ರಾಮಕ್ಕೆ ಬಂದರೆ ಭಾರೀ ಪ್ರಮಾಣದ ದಂಡ ವಿಧಿಸುವುದಾಗಿ ಎಚ್ಚರಿಗೆ ನೀಡಿವೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗ್ರಾಮ ಹಾಗೂ ಪುಣಜನೂರಿನ ಮೂಕನಪಾಳ್ಯದ ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ. ಕೇರಳ, ಕೊರೊನಾ ಹಾಟ್ ಸ್ಪಾಟ್ ತಮಿಳುನಾಡು, ರಾಜ್ಯದ ಬೆಂಗಳೂರು, ಮೈಸೂರಿನಿಂದ ಗ್ರಾಮಕ್ಕೆ ಯಾರಾದರೂ ಬಂದರೆ 10 ಸಾವಿರ ರೂ ದಂಡ, ಬಂದವರನ್ನು ಹಿಡಿದು ಕೊಟ್ಟರೆ 2 ಸಾವಿರ ರೂ. ಬಹುಮಾನ ಕೊಡಲಾಗುವುದು ಎಂದು ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದೇ ವ್ಯಕ್ತಿ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು, ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಜಾಗೃತಿ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಸಭೆ ಕರೆಯುವ ಮೂಲಕ ಜನರೇ ಕೊರೊನಾ ಹೊಡೆದೊಡಿಸಲು ಸಾಕಷ್ಟು ಜಾಗೃತಿ ವಹಿಸಿತ್ತಿದ್ದಾರೆ.

ಸ್ವಯಂ ತಪಾಸಣೆಗೆ ಒಳಗಾಗದಿದ್ರೆ, ಕಾನೂನು ಕ್ರಮ
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ವೈರಸ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ನಡುವೆಯೇ ಈಗ ಬೆಂಗಳೂರಿನಿಂದ ಸಾಕಷ್ಟು ಜನ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹವರಿಗೆ ಶಾಸಕ ನರೇಂದ್ರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕರು, ಬೆಂಗಳೂರಿನಿಂದ ಜಿಲ್ಲೆಗೆ 3800ಕ್ಕೂ ಹೆಚ್ಚು ಜನರು ಬಂದಿದ್ದಾರೆ. ಇವರೆಲ್ಲ ಕಡ್ಡಾಯವಾಗಿ ಖುದ್ದಾಗಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ತಪಾಸಣೆಗೆ ಒಳಗಾಗದೆ ಅಣ್ಣ, ತಮ್ಮ, ಸಂಬಂಧಿ ಬಚ್ಚಿಡುವ ಪ್ರಯತ್ನ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಜರುಗಿಸಲಾಗುವುದು. ಯುವಕರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಬೇಡಿ. ಇದರಿಂದ ಕೊರೊನಾ ಆತಂಕ ಹೆಚ್ಚಾಗಬಹುದು. ಈಗಾಗಲೇ ಕ್ರಿಕೆಟ್ ಆಡಿದ ಒಬ್ಬ ಯುವಕನಿಗೆ ಕೊರೊನಾ ಬಂದಿದ್ದು, ಇದರಿಂದ 30 ರಿಂದ 40 ಮಂದಿಗೆ ಕೊರೊನಾ ಆತಂಕ ಎದುರಾಗಿದೆ ಎಂದು ಸಲಹೆ ನೀಡಿದ್ದಾರೆ.

ಚಾಮರಾಜನಗರದ ಹಲವೆಡೆ ಮಾರಿ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾರೂ ಮಾರಿಹಬ್ಬ, ಜಾತ್ರೆ ಮಾಡ್ಬೇಡಿ ಇದರಿಂದ ರೋಗ ಉಲ್ಬಣ ಆಗುತ್ತೆದೆ. ಬೆಂಗಳೂರಿನಿಂದ ಬಂದ ಯುವಕರು ಕೆಲಸಕ್ಕೆ ಹೋಗ್ತಿಲ್ಲ, ಜನರನ್ನು ಗುಂಪುಗೂಡಿಸಿ ಜೂಜಾಟವಾಡುತ್ತಿದ್ದಾರೆ. ಇದರಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ನಾನು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಮಾದಪ್ಪನ ಸನ್ನಿದಿಯಲ್ಲಷ್ಟೇ ತಪಾಸಣೆ ನಡೀತಿದೆ, ಬರುವ ಭಕ್ತಾದಿಗಳು ಬೆಟ್ಟದಲ್ಲಿ ಓಡಾಡಿ ನಂತರ ದರ್ಶನಕ್ಕೆ ಹೋಗ್ತಾರೆ, ಇದರಿಂದ ಕೊರೊನಾ ಹಬ್ಬುವ ಸಾಧ್ಯತೆ ಇದೆ. ಇಂದಿನಿಂದಲೇ ಮಾದಪ್ಪನ ತಾಳಬೆಟ್ಟದಲ್ಲಿ ತಪಾಸಣೆ ಆರಂಭಿಸುವಂತೆ ಪ್ರಾಧಿಕಾರಕ್ಕೆ ಸೂಚನೆ ಕೊಟ್ಟಿದ್ದೇನೆ. ಚೆಕ್ ಪೋಸ್ಟ್ ನಲ್ಲಿ ಪ್ರತಿಯೊಬ್ಬರ ತಪಾಸಣೆ ನಡೆಸಿ ರೋಗ ಲಕ್ಷಣವಿದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *