ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಓಪನ್- ಭಕ್ತರು ಏನೆಲ್ಲಾ ನಿಯಮ ಪಾಲಿಸಬೇಕು?

Public TV
2 Min Read

– ವೃದ್ಧರು, ಮಕ್ಕಳಿಗಿಲ್ಲ ದೇವರ ದರ್ಶನ

ಚಿಕ್ಕಮಗಳೂರು: ಕೊರೊವಾ ವೈರಸ್ ಆತಂಕದಿಂದಾಗಿ ಕಳೆದ ಮೂರು ತಿಂಗಳಿಂದ ಬಾಗಿಲು ಹಾಕಿದ್ದ ಮೂಡಿಗೆರೆ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಜುಲೈ 1ರಿಂದ ತೆರೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೇವಾಲಯ ಆಡಳಿತ ಮಂಡಳಿ ಭಕ್ತರ ಆರೋಗ್ಯದ ದೃಷ್ಠಿಯಿಂದ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಭಕ್ತರು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿಕೊಂಡಿದೆ. ದೇವಾಲಯಕ್ಕೆ ಬರುವ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಆನ್‍ಲೈನ್‍ನಲ್ಲಿ ಪಾಸ್ ಪಡೆದು ಬರಬೇಕು. ಆನ್‍ಲೈನ್‍ನಲ್ಲಿ ದರ್ಶನದ ಟಿಕೆಟ್ ಇಲ್ಲದಿದ್ದರೆ ಅಂತವರಿಗೆ ಪ್ರವೇಶಕ್ಕೆ ನಿರ್ಬಂಧವಿರುತ್ತದೆ.

ಭಕ್ತರು ದರ್ಶನದ ಟಿಕೆಟ್ ಪ್ರಿಂಟೌಟ್ ಸಮೇತ ಒಂದು ಗಂಟೆ ಮುಂಚೆ ಬಂದು ದೇವಾಲಯದಲ್ಲಿ ತಪಾಸಣೆಗೆ ಒಳಪಡಬೇಕು. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ದರ್ಶನಕ್ಕೆ ಅವಕಾಶವಿದ್ದು, 10 ವರ್ಷ ಒಳಗಿನ ಮಕ್ಕಳು, 65 ವರ್ಷ ದಾಟಿದ ವೃದ್ಧರು ಹಾಗೂ ಗರ್ಭಿಣಿಯರಿಗೆ ಪ್ರವೇಶ ಇರುವುದಿಲ್ಲ. ದೇವಾಲಯದ ಒಳ ಬಂದವರು ಪೂಜೆ ಮುಗಿಸಿ, ಪ್ರಸಾದ ಸೇವಿಸಿಯೇ ಹೊರಗೆ ಹೋಗಬೇಕು, ಮಧ್ಯೆ-ಮಧ್ಯೆ ಹೊರಬಿಡುವುದಿಲ್ಲ. ದೇವರ ಮುಂದೆ ಕೂರಿಸಿ ಅರ್ಚನೆ, ಸಮರ್ಪಣೆ ಮಾಡುವುದಿಲ್ಲ. ಪ್ರಸಾದ ಸೇವಿಸಿದ ಬಳಿಕ ತಟ್ಟೆಯನ್ನ ಭಕ್ತರೇ ಶುಚಿಯಾಗಿ ತೊಳೆದಿಡಬೇಕು. ವಿಶೇಷವೆಂದರೆ ದೇವರ ದರ್ಶನಕ್ಕೆ ಯಾವುದೇ ರೀತಿಯ ದರ ಇರುವುದಿಲ್ಲ.

ದೇವಾಲಯ ಆಡಳಿತ ಮಂಡಳಿ ಹೇಳಿದ ಅವಧಿಗೆ ಸರಿಯಾಗಿ ದರ್ಶನಕ್ಕೆ ಬರಬೇಕು. ಮಾಸ್ಕ್ ಇಲ್ಲದೆ ಬರುವವರಿಗೆ ಪ್ರವೇಶ ಇರುವುದಿಲ್ಲ. ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು. ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇರುವವರಿಗೆ ಪ್ರವೇಶ ಇರುವುದಿಲ್ಲ. ಭಕ್ತರೇ ಸ್ಯಾನಿಟೈಸರ್ ತರಬೇಕು. ಬಂದ ಭಕ್ತರಲ್ಲಿ ಯಾರಿಗಾದರೂ ಶೀತ, ಕೆಮ್ಮು, ಜ್ವರ ಕಂಡು ಬಂದಲ್ಲಿ ಅವರ ಜೊತೆ ಬಂದ ಎಲ್ಲರಿಗೂ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಬಸ್ ಅಥವಾ ಸ್ವಂತ ವಾಹನದಲ್ಲಿ ಬಂದರೂ ಅದರಲ್ಲಿನ ಚಾಲಕ, ಕಂಡಕ್ಟರ್ ಸೇರಿದಂತೆ ಯಾರೇ ಅನಾರೋಗ್ಯಕ್ಕೆ ಒಳಗಾಗಿದ್ದರೂ ಆ ಬಸ್‍ನಲ್ಲಿ ಬಂದ ಎಲ್ಲರಿಗೂ ದೇವರ ದರ್ಶನಕ್ಕೆ ನಿಷೇಧವಾಗಿರುತ್ತದೆ.

ದೇವರಿಗೆ ಮಡಿಲು ಅಕ್ಕಿ ಸೇವೆ ಸಲ್ಲಿಸಿರುವವರು ನಿಗಧಿತ ಸ್ಥಳದಲ್ಲಿ ಇಡಬೇಕು. ಇವುಗಳ ಜೊತೆಯೂ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಹಲವು ನಿಬಂಧನೆಗಳನ್ನ ವಿಧಿಸಿದ್ದು, ಭಕ್ತರು ಸಹಕರಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ದೇವಾಲಯಗಳನ್ನ ತೆರೆಯಲು ಸರ್ಕಾರ ಜೂನ್ 8ರಂದು ಅನುಮತಿ ನೀಡಿದ್ದರೂ ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ಭಕ್ತರ ಆರೋಗ್ಯದ ಹಿತದೃಷ್ಠಿಯಿಂದ ಬಾಗಿಲು ತೆರೆದಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *