ಹೊರಗಿನವರಿಗಿಲ್ಲ ಬ್ರೇಕ್ – ಕೊಡಗಿನಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ

Public TV
2 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜುಲೈ 5 ರವರೆಗೆ ಲಾಕ್‍ಡೌನ್ ಮುಂದುವರಿಸಲಾಗಿದೆ. ಆದರೂ ಹೊರ ಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಮತ್ತು ಕಾರ್ಮಿಕರು ನಿತ್ಯ ನೂರಾರು ಸಂಖ್ಯೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಬರುತ್ತಲೇ ಇದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಮತ್ತಷ್ಟು ಸೋಂಕಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ.

ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಬಂದ್ ಆಗಿದ್ದರೂ ಇದೀಗ ಸಾಕಷ್ಟು ಹೋಂಸ್ಟೇಗಳು ಅನಧಿಕೃತವಾಗಿ ಪ್ರವಾಸಿಗರಿಗೆ ಆತಿಥ್ಯ ನೀಡುತ್ತಿವೆ. ಹೀಗಾಗಿ ಅಧಿಕಾರಿಗಳು ಕೂಡ ನಿತ್ಯ ಒಂದಲ್ಲಾ ಒಂದು ಹೋಂಸ್ಟೇ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ಮತ್ತೊಂದೆಡೆ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಾರೀ ಸಂಖ್ಯೆಯಲ್ಲಿ ಉತ್ತರದ ರಾಜ್ಯಗಳಿಂದ ಕಾರ್ಮಿಕರು ಪುಟ್ಟ ಪುಟ್ಟ ಮಕ್ಕಳ ಸಮೇತ ಕೊಡಗಿಗೆ ಬರುತ್ತಿದ್ದಾರೆ. ಬುಧವಾರ ರಾತ್ರಿ ಕೂಡ ಗುವಾಹಟಿಯ 40ಕ್ಕೂ ಹೆಚ್ಚು ಕಾರ್ಮಿಕರು ಕೊಡಗಿಗೆ ಬರಲು ಯತ್ನಿಸಿದ್ದಾರೆ. ಆದರೆ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದರಿಂದ ಕುಶಾಲನಗರ ಚೆಕ್ ಪೋಸ್ಟ್ ನಲ್ಲಿ ಎಲ್ಲರು ಸಿಕ್ಕಿ ಬಿದ್ದಿದ್ದಾರೆ. ಸದ್ಯ ಅವರೆಲ್ಲರನ್ನೂ ಅಲ್ಲಿಯೇ ಉಳಿಸಲಾಗಿದ್ದು ಯಾವ ತೋಟದ ಮಾಲೀಕರು ಈ ಕಾರ್ಮಿಕರನ್ನು ಕರೆಸಿದ್ದಾರೆ ಎಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇನ್ನೂ ಕೊಡಗು ಜಿಲ್ಲೆಯ ಪಕ್ಕದ ಕೇರಳ ರಾಜ್ಯದಿಂದಲೂ ಸಾಕಷ್ಟು ಜನರು ರಾತ್ರೋ ರಾತ್ರಿ ಕೊಡಗಿಗೆ ಎಂಟ್ರಿ ಆಗುತ್ತಿದ್ದಾರೆ. ಅದರಲ್ಲೂ ಕರಿಕೆ ಚೆಕ್ ಪೋಸ್ಟ್ ನಿಂದ ಸಾಕಷ್ಟು ಜನರು ಕೇರಳದಿಂದ ಬರುತ್ತಿದ್ದು, ಇಲ್ಲಿನವರ ತಮ್ಮ ನಿತ್ಯ ವ್ಯವಹಾರಗಳಿಗೆ ಕೇರಳಕ್ಕೆ ಹೋಗಿ ಬರುತ್ತಿದ್ದಾರೆ. ಇದರಿಂದಾಗಿ ಗಡಿಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಜಾಸ್ತಿಯಾಗುತ್ತಿದೆ ಅನ್ನೋದು ಗಡಿಭಾಗದ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಇನ್ನೂ ತನ್ನ ಪ್ರತಾಪ ತೋರುತ್ತಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಎಷ್ಟೇ ಪ್ರಯತ್ನಿಸುತ್ತಿದ್ದರೂ ನಿಯಮಗಳ ಉಲ್ಲಂಘನೆಯಾಗಿ ಕೋವಿಡ್ ಗೆ ಕಡಿವಾಣ ಬೀಳುತ್ತಲೇ ಇಲ್ಲ. ಇದನ್ನೂ ಓದಿ: ಕೊಡಗಿನಲ್ಲಿ ಜುಲೈ 5ರ ಬಳಿಕವೂ ಅನ್‍ಲಾಕ್ ಡೌಟ್- ಬೋಪಯ್ಯ ಸುಳಿವು

ಬುಧವಾರದ ಬುಲೆಟಿನ್ ಪ್ರಕಾರ, ಕೊಡಗಿನಲ್ಲಿ ಸದ್ಯ 1,814 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಜಿಲ್ಲೆಯಲ್ಲಿ 209 ಜನಕ್ಕೆ ಸೋಂಕು ತಗುಲಿತ್ತು. ಜಿಲ್ಲೆಯಲ್ಲಿ ಇದುವರೆಗೂ 267 ಜನರನ್ನು ಕೋವಿಡ್ ಬಲಿ ಪಡೆದುಕೊಂಡಿದೆ. ಇದನ್ನೂ ಓದಿ: ಕೊಡಗಿನಲ್ಲಿ ಜುಲೈ 5ರವರೆಗೆ ಲಾಕ್‍ಡೌನ್- ಪ್ರವಾಸೋದ್ಯಮಕ್ಕೆ ಅವಕಾಶ ಇಲ್ಲ

Share This Article
Leave a Comment

Leave a Reply

Your email address will not be published. Required fields are marked *