ಹೊರಗಡೆ ಗಣೇಶನ ಚಿತ್ರ, ಒಳಗಡೆ 16 ಲಕ್ಷದ ಕೆನಡಾ ಡ್ರಗ್ಸ್ – ಬೆಂಗಳೂರಲ್ಲಿ ಆರೋಪಿ ಅರೆಸ್ಟ್

Public TV
1 Min Read

ಆನೇಕಲ್: ಕೆನಡಾದಿಂದ ಲೈಸರ್ಜಿಕ್ ಡೈಥಲಾಮೈಡ್ (ಎಲ್‍ಎಸ್‍ಡಿ) ಡ್ರಗ್ಸ್ ತರಿಸಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಅರುಣ್ ಆಂತೋಣಿ(22) ಎಂದು ಗುರುತಿಸಲಾಗಿದೆ. ಈತ ಮೂಲತಃ ಕೇರಳದ ಪೆರಂಬಾಡಿ ಚೇರಾ ಹೌಸ್‍ನ ಕೊಟ್ಟಾಯಂ ನಿವಾಸಿಯಾಗಿದ್ದಾನೆ. ಆನೇಕಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿನ ಸ್ಪರ್ಶ ಆಸ್ಪತ್ರೆಯ ಎಕ್ಸ್-ರೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು.

ಕೆನಡಾದಲ್ಲಿ ಸಿಗುವ ಎಲ್‍ಎಸ್‍ಡಿ ಡ್ರಗ್ಸ್ ಅನ್ನು ಕೇರಳದಿಂದಲೇ ಬೇರೊಬ್ಬರಿಂದ ಬುಕ್ ಮಾಡಿಸಿ ಸ್ಪರ್ಶ ಆಸ್ಪತ್ರೆಯ ತನ್ನ ವಿಭಾಗದ ವಿಳಾಸಕ್ಕೆ 310 ಹಾಳೆಗಳನ್ನು ತರಿಸಿದ್ದನು.

ಈ ಕುರಿತಂತೆ ಬೆಂಗಳೂರು ನಗರ ಮಾದಕ ದ್ರವ್ಯ ನಿಗ್ರಹ ದಳದ ಸಿಸಿಬಿ ಇನ್‍ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯರಿಗೆ ಖಚಿತ ಮಾಹಿತಿ ದೊರಕಿದ್ದು, ಹೆಬ್ಬಗೋಡಿ ಸಿಐ ಗೌತಮ್ ಮತ್ತು ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಯಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ.


ಡ್ರಗ್ಸ್ ಹಾಳೆಯ ಮೇಲೆ ಹಳೆಯ ಛಾಪಾ ಕಾಗದದ ಮಾದರಿಯಲ್ಲಿ ಗಣೇಶನ ಚಿತ್ರ, ಮತ್ತಿತರೆ ಧಾರ್ಮಿಕ ಚಿತ್ರಗಳನ್ನು ಇರಿಸಲಾಗಿತ್ತು. ಯಾರಿಗೂ ಅನುಮಾನ ಬಾರದಂತೆ ಕಾಗದ ಒಳಗಡೆ ಡ್ರಗ್ಸ್ ಇರಿಸಲಾಗಿತ್ತು.

ಒಟ್ಟು ಪಾರ್ಸೆಲ್ ಬಂದಿರುವ ಎಸ್‍ಎಲ್‍ಡಿ ಡ್ರಗ್ಸ್ ಮೌಲ್ಯ 16 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 10×6ರ ಆಕಾರದಲ್ಲಿರುವ ಕಾಗದದಲ್ಲಿ ಮೊಬೈಲ್ ಸಿಮ್ ಸೈಜ್ ಹಾಳೆಯ ಚೂರನ್ನು ರಾಗಿ ಕಾಳಿನಷ್ಟು ಚಪ್ಪರಿಸಿದರೆ ಸಾಕು ಅರ್ಧ ಗಂಟೆಯಲ್ಲಿ ಮತ್ತೇರುತ್ತದೆ. ಈ ಡ್ರಗ್ಸ್ ಹತ್ತು ಗಂಟೆಗಳವರೆಗೂ ನಶೆಯಲ್ಲಿ ಇರಿಸುತ್ತದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *