ಬೆಂಗಳೂರು: ಹೊನ್ನಾಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 1 ಸಾವಿರ ಕೋಟಿ ರೂ ಅನುದಾನ ಸಿಗಲು ನನ್ನ ಅಳಿಲು ಸೇವೆ ಇದೆ ಎಂಬುದನ್ನು ರೇಣುಕಾಚಾರ್ಯ ಮರೆಯಬಾರದು ಎಂದು ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಕ್ಷದೊಳಗಿನ ಲೋಪದೋಷಗಳ ಬಗ್ಗೆ ಮತ್ತು ನನಗೆ ಆಗಿರುವ ನೋವುಗಳ ಬಗ್ಗೆ ಆಯಾ ಸಂದರ್ಭದಲ್ಲಿ ನನ್ನ ನಿಲುವನ್ನು ಪ್ರದರ್ಶಿಸಿದ್ದೇನೆ. ಅದಕ್ಕೆ ಬದ್ಧವಾಗಿರುತ್ತೇನೆ. ರೇಣುಕಾಚಾರ್ಯರವರು ಸಿ.ಎಂ ರವರ ರಾಜಕೀಯ ಕಾರ್ಯದರ್ಶಿ ಆಗಬೇಕಾದರೆ ನನ್ನ ಶ್ರಮವು ಇದೆ. ಅವರಿಗೆ ಸಪ್ತ ಸಚಿವರ ವಸತಿ ಗೃಹದಲ್ಲಿ ಕ್ವಾಟರ್ಸ್ ದೊರೆಯಲು ನನ್ನ ಅಳಿಲು ಸೇವೆ ಇದೆ ಎಂದು ಹೇಳಿದರು.
ನನ್ನನ್ನು ರಾಜೀನಾಮೆ ನೀಡಿ, ವಿಧಾನಸಭೆಗೆ ಆಯ್ಕೆಯಾಗಿ ಬನ್ನಿ ಎಂದು ರೇಣುಕಾರ್ಯ ಸವಾಲು ಹಾಕಿದ್ದಾರೆ. ನಾನು ಸಚಿವನಾಗಿದ್ದಾಗಲೇ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿದ್ದೇನೆ. 5 ಬಾರಿ ವಿವಿಧ ಚಿನ್ಹೆಗಳಲ್ಲಿ ಸ್ಪರ್ಧಿಸಿ, ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ರೇಣುಕಾಚಾರ್ಯರವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನನ್ನ ಬಗ್ಗೆ 40 ಶಾಸಕರು ಹೈಕಮಾಂಡಗೆ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಎಲ್ಲಾ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ವರಿಷ್ಠರಿಗೆ ಹೇಳಿದ್ದೇನೆ. ಮುಂದೆ ಫಲಿತಾಂಶ ಪ್ರಕಟವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು. ಇದನ್ನೂ ಓದಿ: ವೃಷಭಾವತಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ: ಯೋಗೇಶ್ವರ್
ಇದೇ ವೇಳೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ರವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಯೋಗೇಶ್ವರ್‍ರವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಆಡಳಿತ ವೈಖರಿಗಳನ್ನು ಒಪ್ಪಿದ್ದೇನೆ. ನನಗೆ ಆಗುತ್ತಿರುವ ಕಿರುಕುಳ ಹಾಗೂ ನೋವಿನ ಬಗ್ಗೆ ಹೇಳಿಕೊಂಡಿದ್ದೇನೆ. ಕುಮಾರಸ್ವಾಮಿ ಯಡಿಯೂರಪ್ಪರವರಿಗೆ ದುಂಬಾಲು ಬೀಳಲು ಹಗಲು ಹೊತ್ತು ಹೋದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾತ್ರಿವೇಳೆ ಸಿಎಂ ಅವರನ್ನು ಭೇಟಿಯಾಗುತ್ತಾರೆ. ನಾನು ಸಿಎಂ ಬದಲಾಗಬೇಕೆಂದು ಯಾವಾಗಲೂ ಹೇಳಿಲ್ಲ. ನಿನ್ನೆ ತಾನೆ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳು ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದಾರೆ. ಇದು ಸಂತಸದ ವಿಷಯ. ನಮ್ಮ ಮುಖ್ಯಮಂತ್ರಿಗಳು ಸಹ ಸಮರ್ಥರಾಗಿದ್ದು, ನಾನು ಅವರ ವಿರುದ್ಧವೆಂದು ಬಿಂಬಿಸಬೇಡಿ ಎಂದು ಮಾಧ್ಯಮಗಳಿಗೆ ತಿಳಿಸಿದರು.