ಹೆಲಿಪ್ಯಾಡ್ ಇರುವ ಜಾಗ ನಮ್ಮದು, ಅದಕ್ಕೆ ಬೋರ್ಡ್ ಹಾಕಿದ್ದೇವೆ: ಪ್ರಮೋದಾದೇವಿ

Public TV
2 Min Read

ಮೈಸೂರು: ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಸರ್ಕಾರದ್ದಲ್ಲ ನಮ್ಮದು. ನಾವು ಯಾರಿಗೂ ತೊಂದರೆ ಕೊಡಲ್ಲ. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ವಿವಾದದ ಕುರಿತು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಹೆಲಿಪ್ಯಾಡ್ ಇರುವ ಜಾಗ ನಮ್ಮದು. ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ಹೀಗಾಗಿ ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ಯಾರಿಗೋ ತೊಂದರೆ ಕೊಡಬೇಕು ಅನ್ನುವುದು ನಮ್ಮ ಉದ್ದೇಶ ಅಲ್ಲ. ಅಲ್ಲದೆ ಯಾರ ಓಡಾಟವನ್ನೂ ನಿರ್ಬಂಧಿಸಿಲ್ಲ. ಅಗತ್ಯಬಿದ್ದರೆ ಮುಂದೆಯೂ ಹೆಲಿಪ್ಯಾಡ್ ಬಳಸಿಕೊಳ್ಳಲಿ ಎಂದು ಸ್ಪಷ್ಟಪಡಿಸಿದರು.

ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಸರ್ಕಾರದ್ದಲ್ಲ ನಮ್ಮದು. ಬಿ ಖರಾಬ್(ಹಸು ಮೇಯುವ ಸ್ಥಳ) ಅಂತ ಎಲ್ಲೂ ಇಲ್ಲ. ಅದು ಅರಮನೆಗೆ ಸೇರಿದ ಜಾಗ, ಹರ್ಷಗುಪ್ತ ಜಿಲ್ಲಾಧಿಕಾರಿಯಾಗಿದ್ದ ವೇಳೆ ಬಿ ಖರಾಬ್ ಎಂದು ಶುರುವಾಯಿತು. ಬಳಿಕ ವಸ್ತ್ರದ್ ಬಂದ ವೇಳೆ ಅದು ಅರಮನೆ ವಂಶಸ್ಥರಿಗೆ ಸೇರಿದ್ದು ಎಂದು ತೀರ್ಪು ಕೊಟ್ಟಿದ್ದರು. ಬಳಿಕ ಡಿಸಿಯಾಗಿ ಶಿಖಾ ಬಂದ ವೇಳೆ ಸರ್ಕಾರಿ ಭೂಮಿ ಎಂದು ತೀರ್ಪು ಕೊಟ್ಟರು. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಜೂನ್ 19 ರಂದು ಹೈಕೋರ್ಟ್ ಅರಮನೆ ವಂಶಸ್ಥರಿಗೆ ಸೇರಿದ ಭೂಮಿ ಎಂದು ತೀರ್ಪು ಕೊಟ್ಟಿತ್ತು. ಇದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರದ ಅರ್ಜಿಯನ್ನು ಕಳೆದ ಡಿಸೆಂಬರ್ 19 ರಂದು ವಜಾ ಮಾಡಿದೆ ಎಂದು ವಿವರಿಸಿದರು.

ಮೈಸೂರು, ಬೆಂಗಳೂರು ಅರಮನೆಗಳ ವ್ಯಾಜ್ಯ ವಿಚಾರದಲ್ಲಿ ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ. ಈಗಿನ ಸರ್ಕಾರ ತಟಸ್ಥವಾಗಿದೆ. ನಮ್ಮ ಆಸ್ತಿಗಳ ವಿಚಾರದಲ್ಲಿ ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ. ಕೆಲವು ಸರ್ಕಾರಗಳು ಜಾಸ್ತಿ ತೊಂದರೆ ಕೊಟ್ಟಿವೆ. ಕೆಲ ಸರ್ಕಾರಗಳು ಕಡಿಮೆ ತೊಂದರೆ ಕೊಟ್ಟಿವೆ. ಯಾವುದೇ ಸರ್ಕಾರ ಅಥವಾ ವ್ಯಕ್ತಿಯನ್ನು ನಾನು ದೂಷಿಸುವುದಿಲ್ಲ. ಬೆಂಗಳೂರು ಮತ್ತು ಮೈಸೂರು ಅರಮನೆ ಮಾಲೀಕತ್ವದ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇದೆ. ಮುಂಬೈ ಪಾಪರ್ಟಿ ಓನರ್ಸ್ ಅಸೋಸಿಯೇಶನ್ ಸುಪ್ರೀಂ ಕೋರ್ಟ್‍ನಲ್ಲಿ ವ್ಯಾಜ್ಯ ಹೂಡಿದೆ. ಈ ಪ್ರಕರಣದಲ್ಲಿ 9 ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪು ನೀಡಬೇಕಿದೆ. ಆ ತೀರ್ಪು ಆಧರಿಸಿ ನಮ್ಮ ವ್ಯಾಜ್ಯಗಳು ಇತ್ಯರ್ಥ ಆಗಬೇಕಿದೆ. ನಾವು ದೆಹಲಿಯಲ್ಲಿ ಇದ್ದರೆ ವ್ಯಾಜ್ಯಗಳು ಬೇಗ ಬರೆಹರಿಯುತ್ತಿದ್ದವು. ಮೈಸೂರಿನಲ್ಲೇ ಇರುವುದರಿಂದ ವಿಳಂಬ ಆಗುತ್ತಿರಬಹುದು ಎಂದರು.

ರಾಜಕೀಯ ನನಗೆ ಸೂಟ್ ಆಗುತ್ತೆ. ಆದರೆ ರಾಜಕೀಯಕ್ಕೆ ನಾನು ಸೂಟ್ ಆಗುವುದಿಲ್ಲ. ಈ ಹಿಂದೆಯೂ ಹಲವಾರು ಬಾರಿ ಸ್ಪಷ್ಟನೆ ಕೊಟ್ಟಿದ್ದೇನೆ. ಪದೇ ಪದೇ ಅದನ್ನೇ ಹೇಳೋದಿಕ್ಕೆ ಇಷ್ಟ ಇಲ್ಲ. ಆಡಳಿತ ನಡೆಸುವುದಕ್ಕೆ ನನಗೆ ಕಷ್ಟ ಆಗಲ್ಲ. ಆದರೆ ರಾಜಕೀಯಕ್ಕೆ ನಾನು ಸೂಟ್ ಆಗಲ್ಲ. ಹೀಗಾಗಿ ನಾನು ರಾಜಕೀಯಕ್ಕೆ ಹೋಗಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *