ಹೆರಿಗೆಗೆ 3 ದಿನ ಟೈಮ್ ಕೊಟ್ಟಿದ್ದಾರೆ ಸರ್, ನಾನು ಊರಿಗೆ ಹೋಗ್ಲೇಬೇಕು- ಮೆಜೆಸ್ಟಿಕ್‍ನಲ್ಲಿ ಪ್ರಯಾಣಿಕರ ದಂಡು

Public TV
2 Min Read

– ಕೂರಲಾಗದೆ, ನಿಲ್ಲಲಾಗದೇ ಗರ್ಭಿಣಿಯ ಪರದಾಟ
– ಇಂದಿನಿಂದ ಬಸ್ ಸಂಚಾರ ಆರಂಭವಾಗುತ್ತೆ ಅಂತ ಬಂದ ಜನರು

ಬೆಂಗಳೂರು: ಇಂದಿನಿಂದ ಬಸ್ ಸಂಚಾರ ಆರಂಭವಾಗುತ್ತೆ ಅಂತ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ನೂರಾರು ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಎರಡು ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಬಸ್ ಸೇವೆ ಪುನಾರಂಭ ಮುಂದೂಡಿಕೆಯಾಗಿದೆ.

ಇಂದಿನಿಂದ ಬಸ್ ಸಂಚಾರ ಆರಂಭವಾಗುತ್ತೆ ಅಂತ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನೂರಾರು ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಸರ್.. ನಮ್ಮೂರಿಗೆ ಬಸ್ ಎಲ್ಲಿ ಬರುತ್ತೆ, ನಮ್ ಏರಿಯಾಗೆ ಯಾವ ಫ್ಲಾಟ್ ಫಾರಂಗೆ ಬಸ್ ಬರುತ್ತೆ ಎಂದು ಸಿಬ್ಬಂದಿಯನ್ನು ಕೇಳುತ್ತಿದ್ದಾರೆ. ಬಸ್ ಸಂಚಾರ ಸದ್ಯಕ್ಕಿಲ್ಲ ಅಂತ ಪ್ರಯಾಣಿಕರಿಗೆ ಸಾರಿಗೆ ಸಿಬ್ಬಂದಿ ಮಾಹಿತಿ ಕೊಡುತ್ತಿದ್ದಾರೆ.

ಆದರೆ ಮೆಜೆಸ್ಟಿಕ್‍ನಲ್ಲಿ ಗರ್ಭಿಣಿಯೊಬ್ಬರು ಪರದಾಡುತ್ತಿದ್ದಾರೆ. ಯಾದಗಿರಿಗೆ ಹೋಗಲು ಗರ್ಭಿಣಿ ಕುಟುಂಬ ಮೆಜೆಸ್ಟಿಕ್‍ಗೆ ಬಂದಿದೆ. ಗರ್ಭಿಣಿಗೆ ಹೆರಿಗೆಗಾಗಿ ವೈದ್ಯೆರು ಮೂರು ದಿನ ಕಾಲ ಸಮಯ ಕೊಟ್ಟಿದ್ದಾರೆ. ಹೀಗಾಗಿ ಬೇಗ ಊರಿಗೆ ಸೇರೋಣ ಅಂತ ಮೆಜೆಸ್ಟಿಕ್‍ಗೆ ಮಹಿಳೆ ಬಂದಿದ್ದಾರೆ. ಇತ್ತ ಕೂರಲಾಗದೇ, ನಿಲ್ಲಲು ಆಗದೇ ಯಾದಗಿರಿಯ ಗರ್ಭಿಣಿ ಸಂಕಟ ಪಡುತ್ತಿದ್ದಾರೆ. ಇನ್ನೂ ಇಬ್ಬರು ಮಕ್ಕಳನ್ನ ಕಟ್ಟಿಕೊಂಡು ಪತ್ನಿಯನ್ನ ತವರು ಜಿಲ್ಲೆಗೆ ಕರೆದುಕೊಂಡು ಹೋಗಲು ಪತಿ ಹರಸಹಾಸ ಮಾಡುತ್ತಿದ್ದಾರೆ.

ಹೆರಿಗೆಗೆ ಮೂರು ದಿನ ಟೈಮ್ ಕೊಟ್ಟಿದ್ದಾರೆ. ನಾನು ನಮ್ಮೂರಿಗೆ ಹೋಗಲೇಬೇಕು. ಇಲ್ಲಿದ್ದರೆ ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ. ಆದರೆ ಇಲ್ಲಿ ಬಸ್‍ಗಳೇ ಶುರುವಾಗಿಲ್ಲ. ಆದ್ದರಿಂದ ನಾವು ನಮ್ಮ ಊರಿಗೆ ಹೋಗಲೇಬೇಕು ಎಂದು ಮೆಜೆಸ್ಟಿಕ್‍ನಲ್ಲಿ ಗರ್ಭಿಣಿ ಹಠ ಮಾಡುತ್ತಿದ್ದಾರೆ.

ಕೇಂದ್ರ ಮಾರ್ಗಸೂಚಿಗಳ ವರದಿಯನ್ನ ಆಧರಿಸಿ, ಹಲವು ಷರತ್ತುಗಳ ಮೇಲೆ ಬಸ್ ಸಂಚಾರ ಆರಂಭಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್ ಭಾಸ್ಕರ್ ಜೊತೆ ಇಂದು ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಭಿಪ್ರಾಯವನ್ನು ಸಂಗ್ರಹಿಸಿ, ಬಳಿಕ ಸಿಎಂ ಬಸ್ ಸಂಚಾರ ಆರಂಭದ ಕುರಿತು ಸ್ಪಷ್ಟ ಮಾಹಿತಿ ನೀಡಲಿದ್ದಾರೆ.

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ಸುಗಳು ಕಾರ್ಯಾಚರಣೆಗಿಳಿಯದೆ ಡಿಪೋಗಳಲ್ಲೇ ಉಳಿದುಕೊಂಡಿವೆ. ಸರ್ಕಾರದಿಂದ ಆದೇಶ ಬಂದ ಕೂಡಲೇ ವಿವಿಧ ಜಿಲ್ಲೆಗಳ ಬಸ್ಸುಗಳು ಫ್ಲಾಟ್ ಫಾರಂಗೆ ಬರಲಿವೆ. ಇತ್ತ ಬಿಎಂಟಿಸಿ ಬಸ್ಸುಗಳ ಸಂಚಾರವೂ ಕೂಡ ಇಲ್ಲ. ಇನ್ನೂ ಎರಡು ದಿನಗಳ ತನಕ ಬಸ್ ಸಂಚಾರ ಆರಂಭಿಸದಿರಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಗೊಂದಲದಿಂದ ಸಾರಿಗೆ ಇಲಾಖೆ ಇಕ್ಕಟ್ಟಿಗೆ ಸಿಲುಕಿದೆ. ಸದ್ಯಕ್ಕೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ರಾಜ್ಯ ಸರ್ಕಾರದ ಗ್ರೀನ್ ಸಿಗ್ನಲ್‍ಗೆ ಕಾಯುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *