ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭ

Public TV
1 Min Read

ಹುಬ್ಬಳ್ಳಿ: ಕೊರೊನಾ ಲಾಕ್‍ಡೌನ್ ನಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ- ಮಹಾರಾಷ್ಟ್ರ ಬಸ್ ಸಂಚಾರವನ್ನು ಇದೀಗ ಮತ್ತೆ ಆರಂಭಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವುದರಿಂದ ರಾಜ್ಯದಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮೊದಲ ಹಂತದಲ್ಲಿ ವಿಜಯಪುರ ಹಾಗೂ ಚಿಕ್ಕೋಡಿ ಮಾರ್ಗವಾಗಿ ಮಹಾರಾಷ್ಟ್ರದ ಪ್ರಮುಖ ಸ್ಥಳಗಳಾದ ಸೊಲ್ಲಾಪುರ, ಬಾರ್ಶಿ, ಫಂಡರಪುರ, ಔರಂಗಬಾದ್, ಈಚಲಕರಂಜಿ, ಮೀರಜ್ ಮತ್ತಿತರ ಸ್ಥಳಗಳಿಗೆ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ. ನಿಪ್ಪಾಣಿ- ಕೊಲ್ಲಾಪುರ ಮಾರ್ಗವಾಗಿ ಪುಣೆ, ಪಿಂಪ್ರಿ, ಮುಂಬೈ, ಬೊರಿವಿಲಿ, ಶಿರಡಿ ಮತ್ತಿತರ ಸ್ಥಳಗಳಿಗೆ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಪ್ರತಿದಿನ 2 ವೋಲ್ವೋ, 4 ಎಸಿ ಸ್ಲೀಪರ್, 1 ರಾಜಹಂಸ ಹಾಗೂ 14 ವೇಗದೂತ ಸಾರಿಗೆಗಳು ಸೇರಿದಂತೆ ಒಟ್ಟು 21 ಬಸ್ಸುಗಳು ಸಂಚರಿಸುತ್ತಿದ್ದವು. ಇವುಗಳೊಂದಿಗೆ ಹೊರಜಿಲ್ಲೆಗಳಿಂದ ಹುಬ್ಬಳ್ಳಿಯ ಮಾರ್ಗವಾಗಿ ನಿತ್ಯ 57 ಬಸ್ಸುಗಳು ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದವು. ಇದೀಗ ಒಟ್ಟು 14 ಬಸ್ಸುಗಳು ಸಂಚರಿಸಲಿವೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಮಾಹಿತಿ ನೀಡಿದ್ದಾರೆ.

‘ಛೋಟಾ ಮುಂಬೈ’ ಖ್ಯಾತಿಯ ಹುಬ್ಬಳ್ಳಿಗರಿಗೂ ಮಹಾರಾಷ್ಟ್ರಕ್ಕೂ ಅವಿನಾಭಾವ ಸಂಬಂಧವಿದೆ. ಮುಂಬೈ, ಶಿರಡಿ, ಪಿಂಪ್ರಿ, ಪುಣೆ, ಬೊರಿವಿಲಿ, ಈಚಲಕರಂಜಿ, ಔರಂಗಬಾದ್, ಮೀರಜ್, ಸೊಲ್ಲಾಪುರ, ಬಾರ್ಶಿ, ಫಂಡರಪುರ ಮತ್ತಿತರ ಸ್ಥಳಗಳಲ್ಲಿ ಬಹಳಷ್ಟು ಕನ್ನಡಿಗರಿದ್ದಾರೆ. ಈ ಸ್ಥಳಗಳ ನಡುವೆ ಸಂಚರಿಸುವ ಬಸ್ಸುಗಳು ಕೇವಲ ಸಾರಿಗೆ ಸಂಚಾರಕ್ಕಷ್ಟೇ ಸೀಮಿತವಾಗದೆ ಉಭಯ ರಾಜ್ಯಗಳ ಹಲವು ಜನರ ಶಿಕ್ಷಣ, ಉದ್ಯೋಗ, ವಾಣಿಜ್ಯ, ಕೌಟುಂಬಿಕ ಹಾಗೂ ಭಾವನಾತ್ಮಕ ಸಂಬಂಧಗಳ ಸಂಪರ್ಕ ಸೇತುವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *