ಹೀರೋ ಚಿತ್ರಕ್ಕೆ ಮನಸೋತ ಪ್ರೇಕ್ಷಕ ಮಹಾಪ್ರಭುಗಳು

Public TV
2 Min Read

ಚಿತ್ರ: ಹೀರೋ
ನಿರ್ದೇಶನ: ಎಂ. ಭರತ್ ರಾಜ್
ನಿರ್ಮಾಣ: ರಿಷಭ್ ಶೆಟ್ಟಿ ಫಿಲಂಸ್
ಸಂಗೀತ ನಿರ್ದೇಶನ: ಅಜನೀಶ್ ಲೋಕನಾಥ್
ಛಾಯಾಗ್ರಹಣ: ಅರವಿಂದ್ ಎಸ್ ಕಶ್ಯಪ್
ತಾರಾಬಳಗ: ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಇತರರು

ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಹೀರೋ ಸಿನಿಮಾ ಇಂದು ಬಿಡುಗಡೆಯಾಗಿದೆ. ಕುತೂಹಲಕಾರಿ ಟ್ರೇಲರ್ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಸಿನಿರಸಿಕರ ಮನಗೆದ್ದಿದೆ.

ಅಶೋಕವನ ಎಸ್ಟೇಟ್ ಇಡೀ ಸಿನಿಮಾದ ಕೇಂದ್ರ. ಹೀರೋ ಸಿನಿಮಾ ಒಂದು ದಿನ ಶುರುವಾಗಿ ಒಂದೇ ದಿನದಲ್ಲಿ ಮುಗಿಯುವ ಕಥಾಹಂದರ ಒಳಗೊಂಡಿದೆ. ಈ ಒಂದು ದಿನದಲ್ಲಿ ಏನೆಲ್ಲ ಆಗುತ್ತೆ ಅನ್ನೋದನ್ನ ನಿರ್ದೇಶಕ ಭರತ್ ರಾಜ್ ಕಟ್ಟಿಕೊಟ್ಟ ಪರಿ ಪ್ರೇಕ್ಷಕರನ್ನು ಸೆಳೆಯದೇ ಇರದು. ಚಿತ್ರದಲ್ಲಿ ನಾಯಕ ನಟನದ್ದು ಬಾರ್ಬರ್ ಪಾತ್ರ. ಪ್ರೀತಿಯಲ್ಲಿ ಸೋತು ಸುಣ್ಣವಾಗಿರೋ ಈತನಿಗೆ ಒಮ್ಮೆ ತನ್ನ ಹಳೆಯ ಪ್ರೇಯಸಿಯ ಗಂಡನಿಗೆ ಕಟಿಂಗ್ ಮಾಡುವ ಸನ್ನಿವೇಶ ಒದಗಿಬರುತ್ತೆ. ಅವರಿರುವ ಅಶೋಕವನ ಎಸ್ಟೇಟ್ ಗೆ ಹೊರಡುತ್ತಾನೆ. ಪ್ರೇಯಸಿಯಿಂದ ಮೋಸ ಆಗಿದೆ ಆಕೆಯನ್ನು ಸಾಯಿಸಬೇಕು ಎಂದು ಕಥಾನಾಯಕ ನಿರ್ಧರಿಸಿರುತ್ತಾನೆ. ಆದ್ರೆ ಅಲ್ಲಿ ಹೋದಾಗ ಬೇರೆಯದ್ದೇ ಕಥೆ ಇರುತ್ತೆ. ಮುಂದೇನಾಗುತ್ತೆ ಅನ್ನೋದೆ ಇಂಟ್ರಸ್ಟಿಂಗ್ ಕಹಾನಿ.

ಉಳಿದಂತೆ ಆಕ್ಷನ್, ಕಾಮಿಡಿ, ಲವ್, ಸೆಂಟಿಮೆಂಟ್ ಎಳೆ ಜೊತೆ ರಕ್ತಸಿಕ್ತ ಸನ್ನಿವೇಶಗಳೂ ಸಿನಿಮಾದಲ್ಲಿದೆ. ಪ್ರೇಯಸಿ ಪಾತ್ರದಲ್ಲಿ ಗಾನವಿ ಲಕ್ಷ್ಮಣ್ ನಟಿಸಿದ್ರೆ, ಪ್ರೇಯಸಿಯ ಗಂಡನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿಯವರದ್ದು ಇಲ್ಲಿ ಖಳನಟನ ಪಾತ್ರ.

ಚಿತ್ರಕಥೆ ಚಿತ್ರದ ಮೈನ್ ಹೈಲೈಟ್ ಆಗಿದ್ದು, ಮೇಕಿಂಗ್ ಮತ್ತೊಂದು ಆಕರ್ಷಣೆ. ಕಚಗುಳಿ ಇಡುವ ಡೈಲಾಗ್‍ಗಳು ಮಜಾ ನೀಡುತ್ತವೆ. ರೆಗ್ಯೂಲರ್ ಸಿನಿಮಾಗಳಂತೆ ಇಲ್ಲಿ ನಾಯಕ, ನಾಯಕಿ, ಉಳಿದ ಪಾತ್ರಗಳಿಗೆ ಹೆಸರಿಲ್ಲ. ನಿರ್ದೇಶಕ ಭರತ್ ರಾಜ್ ಮೊದಲ ಪ್ರಯತ್ನದಲ್ಲೇ ತಮ್ಮ ನಿರ್ದೇಶನದ ಕಲೆಯನ್ನು ಸಾಬೀತು ಪಡಿಸಿದ್ದಾರೆ. ಕೆಲವೊಂದು ಸೀನ್‍ಗಳು ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿಯಂತಿದೆ. ಒಟ್ಟಿನಲ್ಲಿ ಒಂದು ಹೊಸ ರೀತಿಯ ಪ್ರಯತ್ನವಿರುವ ಸಿನಿಮಾ ಹೀರೋ.

ಹೀರೋ ಸಿನಿಮಾ ಮೂಲಕ ಮತ್ತೊಮ್ಮೆ ತಾವೊಬ್ಬ ಪ್ರಾಮಿಸಿಂಗ್ ನಟ ಅನ್ನೋದನ್ನ ಪ್ರೂವ್ ಮಾಡಿದ್ದಾರೆ ರಿಷಭ್ ಶೆಟ್ಟಿ. ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿ ಖಳನಟನ ಪಾತ್ರದಲ್ಲಿ ಮಿಂಚಿರೋ ಪ್ರಮೋದ್ ಶೆಟ್ಟಿ ಅಭಿನಯ ಕೂಡ ಮೆಚ್ಚುವಂತದ್ದು ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಹಾವ-ಭಾವದಲ್ಲಿಯೇ ಅವರ ನಟನೆ ಇಲ್ಲಿ ಗಮನ ಸೆಳೆಯುತ್ತದೆ. ಉಳಿದಂತೆ ತಾಂತ್ರಿಕ ವರ್ಗವೇ ಕಲಾವಿದರಾಗಿ ನಟಿಸಿದ್ದು ಚಿತ್ರದ ಮತ್ತೊಂದು ವಿಶೇಷ. ಗಾನವಿ ಲಕ್ಷ್ಮಣ್ ನಟನೆ ಎಲ್ಲರ ಗಮನ ಸೆಳೆಯುತ್ತದೆ.

ಒಂದು ಕಡೆ ಕಲಾವಿದರು ಗಮನ ಸೆಳೆದರೆ ಇನ್ನೊಂದು ಕಡೆ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಸಿನಿಮಾ ಆವರಿಸಿಕೊಂಡು ಕಿಕ್ ಕೊಡುತ್ತದೆ. ಛಾಯಾಗ್ರಹಣ ಕೂಡ ಅಷ್ಟೇ ಸೊಗಸಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಹೊಸ ಪ್ರಯತ್ನವಿರುವ, ಹೊಸತನ ಇರುವ ಹೀರೋ ಸಿನಿಮಾ ಪ್ರೇಕ್ಷಕರನ್ನು ಸೆಳೆಯದೇ ಇರಲಾರದು.

Share This Article
Leave a Comment

Leave a Reply

Your email address will not be published. Required fields are marked *