‘ಹೀರೋ’ ಎಂಟ್ರಿಗೆ ದಿನಾಂಕ ಫಿಕ್ಸ್- ಮಾರ್ಚ್ 5ಕ್ಕೆ ರಿಷಭ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ

Public TV
1 Min Read

ರಿಷಭ್ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 5ಕ್ಕೆ ‘ಹೀರೋ’ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡಲಿರುವ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ. ಚಿತ್ರದ ಕುತೂಹಲ ಭರಿತ ಟ್ರೇಲರ್ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನು ಚಿತ್ರತಂಡದ ಮುಂದಿಟ್ಟಿದ್ರು. ಇದೀಗ ಪ್ರೇಕ್ಷಕ ಮಹಾಪ್ರಭುಗಳ ಕಾಯುವಿಕೆಗೆ ಉತ್ತರ ಸಿಕ್ಕಿದ್ದು, ಮಾರ್ಚ್ 5ರಂದು ‘ಹೀರೋ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಹೀರೋ’. ಬೆಲ್ ಬಾಟಂ ಸಿನಿಮಾ ನಂತರ ರಿಷಭ್ ನಾಯಕ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಭರತ್ ರಾಜ್ ‘ಹೀರೋ’ ನಿರ್ದೇಶಕ. ನಿರ್ದೇಶಕನಾಗಿ ಇದು ಇವರ ಮೊದಲ ಪ್ರಯತ್ನ ಕೂಡ ಹೌದು. ಲಾಕ್‍ಡೌನ್ ಅವಧಿಯಲ್ಲೇ ಇಡೀ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ಸೈ ಎನಿಸಿಕೊಂಡಿತ್ತು ಚಿತ್ರತಂಡ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಒಂದೊಂದೇ ಅಪ್ಡೇಟ್ಸ್ ನೀಡುತ್ತ ಸಿನಿಮಾ ಬಗ್ಗೆ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಚಿತ್ರದ ಟ್ರೇಲರ್ ಎಲ್ಲರ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವುದರ ಜೊತೆಗೆ ಸಿನಿಮಾ ಮೇಲಿನ ಒಲವನ್ನು ಇನ್ನಷ್ಟು ಹೆಚ್ಚು ಮಾಡಿದೆ.

ಸಸ್ಪೆನ್ಸ್, ಆಕ್ಷನ್, ಕಾಮಿಡಿ, ಥ್ರಿಲ್ಲರ್, ಲವ್ ಎಲ್ಲಾ ಎಲಿಮೆಂಟ್ ಗಳನ್ನು ಒಳಗೊಂಡಿರುವ ‘ಹೀರೋ’ ಚಿತ್ರದಲ್ಲಿ ರಿಷಭ್ ಶೆಟ್ಟಿ, ಗಾನವಿ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಕ್ಷೌರಿಕನ ಪಾತ್ರದಲ್ಲಿ ರಿಷಭ್ ಶೆಟ್ಟಿ ಬಣ್ಣಹಚ್ಚಿದ್ದಾರೆ. ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ವಿಕ್ರಂ ಮೋರ್ ಸಾಹಸ ನಿರ್ದೇಶನದಲ್ಲಿ ‘ಹೀರೋ’ ಸಿನಿಮಾ ಸಾಹಸ ದೃಶ್ಯಗಳು ಮೂಡಿ ಬಂದಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಒಳಗೊಂಡಂತೆ ಹಲವು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *