ಹಿರಿಯ ರಂಗಕರ್ಮಿ, ಗುಡ್ಡದ ಭೂತ ಸೀರಿಯಲ್ ನಟ ಉದ್ಯಾವರ ಮಾಧವ ಆಚಾರ್ಯ ಇನ್ನಿಲ್ಲ

Public TV
1 Min Read

ಉಡುಪಿ: ಹಿರಿಯ ರಂಗಕರ್ಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐವತ್ತಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ ಉಡುಪಿಯ ಉದ್ಯಾವರ ಮಾಧವ ಆಚಾರ್ಯ ಕೊನೆಯುಸಿರೆಳೆದಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಉದ್ಯಾವರ ಮಾಧವ ಆಚಾರ್ಯರಿಗೆ 79 ವರ್ಷವಾಗಿತ್ತು. ರಂಗಭೂಮಿ ನಿರ್ದೇಶಕರಾಗಿ, ಕಥೆಗಾರನಾಗಿ, ಕವಿಯಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದರು. ಬಾರಿ ಜನಮೆಚ್ಚುಗೆ ಪಡೆದಿದ್ದ ಗುಡ್ಡದ ಭೂತ ಧಾರಾವಾಹಿಯಲ್ಲಿ ಮಾಧವ ಆಚಾರ್ಯ ನಟಿಸಿದ್ದರು. ಉಡುಪಿಯ ಸಮೂಹ ಸಂಸ್ಥೆಯನ್ನು ಹುಟ್ಟು ಹಾಕಿದ್ದ ಇವರು, ತಮ್ಮ ತಂಡವನ್ನು ದೇಶ-ವಿದೇಶಗಳಿಗೆ ಕೊಂಡೊಯ್ದು ನಾಟಕ, ರೂಪಕಗಳನ್ನು ಪ್ರದರ್ಶಿಸಿದ್ದರು.

ರಾಜ್ಯೋತ್ಸವ, ರಂಗ ವಿಶಾರದ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸನ್ಮಾನಗಳು ಆಚಾರ್ಯರಿಗೆ ಒಲಿದು ಬಂದಿದೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಕುಂದಾಪುರದ ಬಿಪಿ ಶೆಟ್ಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಬಾಗಿದ ಮರ- ಕಥಾಸಂಕಲನ, ರಂಗಸ್ಥಳದ ಕನವರಿಕೆಗಳು, ಎಂಬ ಕವನ ಸಂಕಲನ, ಕೃಷ್ಣನ ಸೋಲು, ಗಾಂಧಾರಿ ನಾಟಕ ಶಬರಿ, ಅಂಧಯುಗ, ಪಾಂಚಾಲಿ, ಅಂಬೆ, ನಾಟಕ ನೃತ್ಯ ರೂಪಕಗಳನ್ನು ರಚಿಸಿ ನಿರ್ದೇಶಿಸಿದ್ದರು. ಮಂಗಳೂರು ಆಕಾಶವಾಣಿ ಮೂಲಕ ಹಲವಾರು ನಾಟಕಗಳು ಪ್ರಸಾರಗೊಂಡಿದ್ದವು. ಹಿರಿಯ ಅರ್ಥಶಾಸ್ತ್ರಜ್ಞರಾಗಿಯೂ ಸಮಾಜಕ್ಕೆ ಉದ್ಯಾವರ ಮಾಧವ ಆಚಾರ್ಯ ಸೇವೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *