ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

Public TV
2 Min Read

– ಎರಡು ಒಗಟುಗಳು ಶೀಘ್ರವೇ ಸ್ಫೋಟ
– ದಾಖಲೆ ಇಲ್ಲದೇ ನಾನು ಮಾತನಾಡಲ್ಲ
– ಜಮೀರ್‌ ಪಾಸ್‌ಪೋರ್ಟ್‌ ತೋರಿಸಿದ್ರೆ ಉತ್ತರ ಸಿಕ್ಕುತ್ತೆ

ಬೆಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಈ ಹಿಂದೆ ಹೇಳಿದ ಮೂರು ಸ್ಫೋಟಕ ಒಗಟುಗಳು ಎಲ್ಲ ಸತ್ಯವಾಗಿದೆ ಎಂದು ಉದ್ಯಮಿ, ಸಿನಿ ವಿತರಕ ಪ್ರಶಾಂತ್‌ ಸಂಬರಗಿ ಹೇಳಿದ್ದಾರೆ.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರಿಂದ ನೋಟಿಸ್‌ ಬಂದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಂದು ಬೆಳಗ್ಗೆ 10 ಗಂಟೆಗೆ ನಾನು ಸಿಸಿಬಿ ಕಚೇರಿಗೆ ತೆರಳಿ ನನ್ನಲ್ಲಿರುವ ಪ್ರಮುಖ ಸಾಕ್ಷ್ಯಗಳನ್ನು ನೀಡುತ್ತೇನೆ. ನಾನು ಗಾಳಿಯಲ್ಲಿ ಗುಂಡು ಹಾರಿಸುವ ವ್ಯಕ್ತಿಯಲ್ಲ. ನಾನು ಈ ಹಿಂದೆ ಹೇಳಿದ ಎಲ್ಲ ಒಗಟುಗಳು ಸತ್ಯವಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಮುಂಬೈಗೆ ಸೊಸೆಯಾಗಿ ಒಬ್ಬರು ತೆರಳಿರುವ ಕುಟುಂಬದ ವ್ಯಕ್ತಿಯ ಬಗ್ಗೆ ಹೇಳಿದ್ದೆ. ಇದು ನಿಜವಾಗಿದ್ದು ಜೀವರಾಜ್ ಆಳ್ವಾ ಮಗ ಆದಿತ್ಯಾ ಆಳ್ವಾ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ಮನೆ ಮಗಳು ಮುಂಬೈಯಲ್ಲಿರುವ ನಟ ವಿವೇಕ್ ಒಬೆರಾಯ್ ಮದುವೆಯಾಗಿದ್ದಾರೆ. ಸುಶಾಂತ್‌ ಸಿಂಗ್‌ ಪ್ರಕರಣಕ್ಕೂ ಬೆಂಗಳೂರಿಗೂ ಸಂಬಂಧ ಇದೆ ಎಂದು ತಿಳಿಸಿದ್ದು ಅದು ಕೂಡ ನಿಜವಾಗಿದ್ದು ಎನ್‌ಸಿಬಿಯಿಂದ ಬಿಬಿಎಂಪಿ ಕಾಂಗ್ರೆಸ್‌ ಸದಸ್ಯ ಕೇಶವ್ ಮೂರ್ತಿ ಮಗನಿಗೆ ನೋಟಿಸ್ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ಬರುತ್ತಿತ್ತು 4 ಲಕ್ಷ ಸಂಬಳ

 

ಡ್ರಗ್ಸ್‌ ದಂಧೆಯಲ್ಲಿ ಬಾಲಿವುಡ್‌ಗೂ ಸ್ಯಾಂಡಲ್‌ವುಡ್‌ಗೂ ಸಂಬಂಧ ಇದೆ. ಅದರಲ್ಲಿ ಇಮ್ತಿಯಾಸ್ ಖಾತ್ರಿ ಇದ್ದಾನೆ ಅಂತ ಹೇಳಿದ್ದೆ. ಅದು ಕೂಡ ನಿಜವಾಗಿದೆ. ನಾನು ಮಾಡಿದ ಎಲ್ಲಒಗಟುಗಳು ನಿಜವಾಗಿದ್ದು ಇನ್ನು ಎರಡು ಒಗಟುಗಳು ಶೀಘ್ರವೇ ಸ್ಫೋಟಗೊಳ್ಳಲಿದೆ ಎಂದು ಹೇಳಿದರು.

ಈ ವೇಳೆ ಇನ್ನು ಎರಡು ವಿಚಾರ ಯಾವುದು ಎಂದು ಕೇಳಿದ್ದಕ್ಕೆ ಈಗ ನಾನು ಹೇಳುವುದಿಲ್ಲ ಮುಂದೆ ತಿಳಿಸುತ್ತೇನೆ ಎಂದು ಉತ್ತರಿಸಿದರು.

ನಾನು ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ನಾನು ಸಂಜನಾ ಜೊತೆಯಲ್ಲೇ ಜಮೀರ್‌ ಶ್ರೀಲಂಕಾಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಆದರೆ 2019ರ ಜೂನ್ 8,‌ 9, 10ರಂದು ಜಮೀರ್ ಅಹ್ಮದ್ ಎಲ್ಲಿದ್ದರು? ಅವರು ಶ್ರೀಲಂಕಾದಲ್ಲಿ ಇದ್ದರೋ ಇಲ್ಲವೋ ಎನ್ನುವುದನ್ನು ಹೇಳಲಿ. ನನಗೆ ಜಮೀರ್‌ ಉತ್ತರ ನೀಡುವ ಅಗತ್ಯವಿಲ್ಲ. ಜನತೆ ಪಾಸ್‌ಪೋರ್ಟ್‌ ತೋರಿಸಿದರೆ ಸಾಕು. ನನ್ನ ಒಂದು ಸಣ್ಣ ಪ್ರಶ್ನೆಗೆ ಉತ್ತರ ನೀಡಲಿ ಎಂದು ಸವಾಲು ಎಸೆದರು.

ನನ್ನನ್ನು ಕಾಜಿಪಿಂಜಿ ಎಂದು ಕರೆಯುತ್ತಾರೆ. ಆದರೆ ನಾನು ಕಾಜಿಪಿಂಜಿ ಅಲ್ಲ. ಕಾನೂನು ಗೊತ್ತಿರುವ ನಾನು ಒಬ್ಬ ಜನ ಪ್ರತಿನಿಧಿಯ ವಿರುದ್ಧ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ನನ್ನ ವಿರುದ್ಧ ಈಗ ಸುಳ್ಳು ಕೇಸ್‌ ಹಾಕಿದ್ದಾರೆ. ಈ ರೀತಿ ಕೇಸ್‌ ಬೀಳುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಇದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದರು.

ತನ್ನ ಬಗ್ಗೆ ಬಂದಿರುವ ಬಿಜೆಪಿ ಏಜೆಂಟ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನಾನು ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದೆ. ಅವರ ಕನ್ನಡ ಪರ ನಿಲುವು ನನಗೆ ಬಹಳ ಇಷ್ಟವಾಗಿತ್ತು. ಅವರ ಕೆಳಗಡೆ ಕುಳಿತಿದ್ದ ಫೋಟೋ ಫೇಸ್‌ಬುಕ್‌ನಲ್ಲಿ ಹಾಕಿದ್ದೆ. ಕುಮಾರಸ್ವಾಮಿಯವರ ಜೊತೆಯಲ್ಲೂ ನಾನು ಮಾತನಾಡಿದ್ದೇನೆ. ನಾನು ಯಾರ ಏಜೆಂಟ್‌ ಅಲ್ಲ. ನಾನೊಬ್ಬ ಕನ್ನಡಿಗ. ಕನ್ನಡಕ್ಕಾಗಿ ಹೋರಾಡುವ ವ್ಯಕ್ತಿ ಎಂದು ತಿಳಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *