‘ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ’ – ಪಾಕ್‌ ಮಾಜಿ ಸ್ಪಿನ್ನರ್‌ ಕನೇರಿಯಾ

Public TV
1 Min Read

ಇಸ್ಲಾಮಾಬಾದ್‌: ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್‌ ದಾನಿಶ್ ಕನೇರಿಯಾ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಬುಧವಾರ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿದ ಹಿನ್ನೆಲೆಯಲ್ಲಿ ಮೂರು ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

ಇಂದು ವಿಶ್ವಾದ್ಯಂತ ಹಿಂದೂಗಳಿಗೆ ಐತಿಹಾಸಿಕ ದಿನ. ದೇವರು ರಾಮ ನಮ್ಮ ಆದರ್ಶ. ರಾಮನ ಸೌಂದರ್ಯವು ಅವನ ಹೆಸರಿನಲ್ಲಿ ಅಲ್ಲ, ಅವನ ಪಾತ್ರದಲ್ಲಿದೆ. ದುಷ್ಟರ ಮೇಲಿನ ವಿಜಯದ ಸಂಕೇತ ರಾಮ. ಇಂದು ಪ್ರಪಂಚದಾದ್ಯಂತ ಸಂತೋಷದ ಅಲೆ ಇದೆ. ಇದು ಬಹಳ ತೃಪ್ತಿಯ ಕ್ಷಣವಾಗಿದೆ ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ನಾವು ಸುರಕ್ಷಿತವಾಗಿದ್ದೇವೆ ಮತ್ತು ನಮ್ಮ ಧಾರ್ಮಿಕ ನಂಬಿಕೆಗಳೊಂದಿಗೆ ಯಾರಿಗೂ ಯಾವುದೇ ಸಮಸ್ಯೆ ಇರಬಾರದು. ಪ್ರಭು ಶ್ರೀರಾಮನ ಜೀವನವು ನಮಗೆ ಏಕತೆ ಮತ್ತು ಸಹೋದರತೆಯನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.

ಪಾಕ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ ಕನೇರಿಯಾ ಆಗಿದ್ದಾರೆ. ದಾನಿಶ್ ಅವರಿಗೂ ಮುನ್ನ ಅವರ ಸಹೋದರ ಸಂಬಂಧಿ ಅನಿಲ್ ದಲಪತ್ ಆಡಿದ್ದರು. ದಲಪತ್ ಪಾಕ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿದ್ದರು. ಈ ಹಿಂದೆ ದಾನಿಶ್ ವೃತ್ತಿಜೀವನದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡಿದ್ದು, ಅಫ್ರಿದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *