ಹಾಸನ, ಬೆಂಗ್ಳೂರು, ಅತ್ತಿಬೆಲೆ, ರಾಮನಗರದಲ್ಲಿ ಡ್ಯೂಟಿ – ಆತಂಕ ಮೂಡಿಸಿದ ಪೇದೆಯ ಟ್ರಾವೆಲ್ ಹಿಸ್ಟರಿ

Public TV
1 Min Read

ಹಾಸನ: ಭಾನುವಾರ ಬೆಳಕಿಗೆ ಬಂದ ಹಾಸನ ಕೆಎಸ್‌ಆರ್‌ಪಿ ಪೇದೆ (ರೋಗಿ ಸಂಖ್ಯೆ 1993)ಯ ಟ್ರಾವೆಲ್ ಹಿಸ್ಟರಿ ಎಲ್ಲರ ಆತಂಕಕ್ಕೆ ಕಾರಣ ಆಗಿದೆ. ಮೇ 17 ರಿಂದ ಮೇ 19ರವರೆಗೆ ವಿವಿಧ ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. ನೂರಕ್ಕೂ ಅಧಿಕ ಜನರ ಜೊತೆ ಸಂಪರ್ಕ ಹೊಂದಿದ್ದರಿಂದ ಈಗ ಆತಂಕ ಎದುರಾಗಿದೆ.

ಟ್ರಾವೆಲ್ ಹಿಸ್ಟರಿ ಹೀಗಿದೆ:
ಮೇ 7 ರಂದು ಹಾಸನದಿಂದ 20 ಸಹೋದ್ಯೋಗಿಗಳ ಜೊತೆ ಬೆಂಗಳೂರಿಗೆ ಬಂದಿದ್ದ ಇವರನ್ನು ಮಾದನಾಯಕನಹಳ್ಳಿ ಬಳಿ ಬಿಹಾರಿ ಕಾರ್ಮಿಕರ ಬಂದೋಬಸ್ತ್ ಮಾಡಲು ಡ್ಯೂಟಿಗೆ ಹಾಕಲಾಗಿತ್ತು. ಈ ವೇಳೆ ಅಂಚೆಪಾಳ್ಯದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಹೋದ್ಯೋಗಿಗಳು, ಗೃಹ ರಕ್ಷಕ ದಳದ ಸಿಬ್ಬಂದಿ ಜೊತೆ ವಾಸ್ತವ್ಯ ಮಾಡಿದ್ದರು.

ಮೇ 8-9 ರಂದು ಮಾದನಾಯಕನಹಳ್ಳಿಯಲ್ಲಿ ಎಲ್ಲರೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಇವರು ಮೇ 10ರಿಂದ 14ರವರೆಗೆ ಅತ್ತಿಬೆಲೆ ಚೆಕ್‍ಪೋಸ್ಟ್ ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು.

ಮೇ 14ರವರೆಗೂ ಅತ್ತಿಬೆಲೆ ಸಮೀಪದ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದ ಇವರು ಮೇ 14ರ ಮಧ್ಯಾಹ್ನ ಬಿಡದಿಯಲ್ಲಿ ಮುತ್ತಪ್ಪ ರೈ ಶವಯಾತ್ರೆಯ ಬಂದೋಬಸ್ತ್ ಡ್ಯೂಟಿ ಮಾಡಿದ್ದರು. ಅಂದು ರಾತ್ರಿ ರಾಮನಗರದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದರು.

ಮೇ 15ರಿಂದ 17ರವರೆಗೆ ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿ, ಮೇ 17ರ ಸಂಜೆ ಹಾಸನಕ್ಕೆ ಮರಳಿದ್ದಾರೆ. ಹಾಸನಕ್ಕೆ ಬಂದ ಬಳಿಕ ಆಟೋದಲ್ಲಿ ಎನ್ ಆರ್ ವೃತ್ತಕ್ಕೆ ಪ್ರಯಾಣಿಸಿ ಪುಸ್ತಕ ಮಳಿಗೆ, ಬಟ್ಟೆ ಅಂಗಡಿ, ದಿನಸಿ ಅಂಗಡಿಗೆ ಭೇಟಿ ನೀಡಿದ್ದಾರೆ. ಇದಾದ ಬಳಿಕ ಮೇ 19 ರಂದು 94 ಸಹೋದ್ಯೋಗಿಗಳ ಜೊತೆ ಪಿ.ಟಿಯಲ್ಲಿ ಭಾಗಿಯಾಗಿದ್ದರು. ಅದೇ ದಿನ ರಾತ್ರಿ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಪಡೆದು ಲ್ಯಾಬ್ ಗೆ ಕಳುಹಿಸಲಾಗಿತ್ತು. ಭಾನುವಾರ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.

12 ದಿನದಲ್ಲಿ ಹಲವು ಜನರ ಜೊತೆ ನೇರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಅವರನ್ನೆಲ್ಲ ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಅನಾಹುತ ಆಗದಂತೆ ತಡೆಯಲು ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು ಸದ್ಯಕ್ಕೆ ಸಮಾಧಾನ ನೀಡುವ ಸಂಗತಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *