ಹಾಸನಾಂಬೆ ದರ್ಶನ – ಜಿಲ್ಲಾಡಳಿತದ ನಿರ್ಧಾರಕ್ಕೆ ಸಾರ್ವಜನಿಕರ ಆಕ್ರೋಶ

Public TV
2 Min Read

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಕೊರೊನಾದಿಂದಾಗಿ ಈ ವರ್ಷ ಹಾಸನಾಂಬ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ. ಆದರೆ ಈ ವಿಷ್ಯದಲ್ಲಿ ಜನ ಪ್ರತಿನಿಧಿಗಳ ಇಬ್ಬಗೆ ನೀತಿ ಹಾಸನ ಜನರ ಕೋಪಕ್ಕೆ ಕಾರಣವಾಗಿದೆ.

ಹಾಸನ ನಗರದ ಹೊಸಲೈನ್ ರಸ್ತೆಯಲ್ಲಿರುವ ಹಾಸನಾಂಬ ದೇವಾಲಯದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆರೆದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಹಲವು ಪವಾಡಗಳಿಗೆ ಪ್ರಸಿದ್ಧಿಯಾದ ಹಾಸನನಾಂಬ ದೇವಿಯ ದರ್ಶನವನ್ನು ಪಡೆದರೆ ಇಷ್ಟಾರ್ಥ ಸಿದ್ಧಿಸುತ್ತೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ವರ್ಷಕ್ಕೊಮ್ಮೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆದಾಗ ಲಕ್ಷಾಂತರ ಜನ ದೇವಾಲಯಕ್ಕೆ ಆಗಮಿಸಿ, ಕಿಲೋಮಿಟರ್‍ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದರು.

ಈ ವರ್ಷವೂ ಕೂಡ ನವೆಂಬರ್ 5ರಿಂದ 16ರವರೆಗೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಆದರೆ ಈ ವರ್ಷ ಕೊರೊನಾ ಕಾರಣದಿಂದ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಹಾಸನದ ಸುಮಾರು 12 ಕಡೆ ಎಲ್‍ಇಡಿ ಪರದೆ ಹಾಕಿ, ನೇರ ಪ್ರಸಾರದ ಮೂಲಕ ಭಕ್ತರು ಹಾಸನಾಂಬ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಬಾಗಿಲು ತೆಗೆಯುವ ವೇಳೆ ಉದ್ಘಾಟನೆಗೆ ಬರುವಂತೆ ಸಿಎಂ ಅವರನ್ನು ಕರೆಯುತ್ತೇವೆ. ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹಾಸನ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.

ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಬ್ಬಗೆ ನೀತಿ ಹಾಸನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನಾಂಬೆ ದೇವಾಲಯದ ಬಾಗಿಲು ತೆರೆದ ಮೊದಲನೇ ಮತ್ತು ಕೊನೆಯ ದಿನ ಆಹ್ವಾನಿತ ಗಣ್ಯರಿಗೆ ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶ ಅಂತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ತಮಗೆ ಬೇಕಾದ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಶ್ರೀಮಂತರಿಗೆ ಇವರು ದರ್ಶನ ಭಾಗ್ಯ ಕೊಡಲು ಆಹ್ವಾನಿತರಿಗಷ್ಟೇ ನೇರ ದರ್ಶನಕ್ಕೆ ಅವಕಾಶ ಅಂತಿದ್ದಾರೆ. ಹಾಗಾದರೆ ಅವರಿಂದ ಯಾರಿಗೂ ಕೊರೊನಾ ಹರಡುವುದಿಲ್ಲವೇ? ಈ ದೇಶಕ್ಕೆ ಕೊರೊನಾ ಹರಡಿದ್ದೆ ವಿಐಪಿಗಳು? ಈಗ ಆ ವಿಐಪಿಗಳು ಇಲ್ಲಿಗೆ ಬಂದು ಕೊರೊನಾ ಹರಡೋದು ಬೇಡ. ಸಾಮಾನ್ಯ ಭಕ್ತರಿಗೆ ನೇರ ದರ್ಶನ ವ್ಯವಸ್ಥೆ ಇಲ್ಲ ಎಂದ ಮೇಲೆ ಯಾರಿಗೂ ನೇರ ದರ್ಶನದ ವ್ಯವಸ್ಥೆ ಕಲ್ಪಿಸದೆ, ಎಲ್ಲರಿಗೂ ಒಂದೇ ಕಾನೂನು ಪಾಲಿಸಲಿ. ದೇವರ ದರ್ಶನ ವಿಷ್ಯವಾಗಿ ತಾರತಮ್ಯ ಮಾಡಬೇಡಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವರ ದರ್ಶನದ ವಿಚಾರವಾಗಿ ರಾಜಕಾರಣಿಗಳು, ಅಧಿಕಾರಿಗಳು ತೆಗೆದುಕೊಂಡ ಇಬ್ಬಗೆ ನೀತಿ ಹಾಸನದ ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರ ಆಕ್ರೋಶಕ್ಕೆ ಮಣಿದು, ಆಹ್ವಾನಿತರಿಗಷ್ಟೇ ಹಾಸನಾಂಬ ನೇರ ದರ್ಶನಕ್ಕೆ ಅವಕಾಶ ಎಂಬ ನಿಯಮವನ್ನು ಜಿಲ್ಲಾಡಳಿತ ತೆಗೆದು ಹಾಕಿ, ಎಲ್ಲರಿಗೂ ಒಂದೇ ನಿಯಮ ಎಂಬ ತೀರ್ಮಾನಕ್ಕೆ ಬರುತ್ತಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *