ಹಾಸನದಲ್ಲಿ ಮದ್ಯಪ್ರಿಯರಿಗೆ ಬಂಪರ್, ರೈತರಿಗೆ ಶಾಕ್ – ಇದೆಂಥಾ ನ್ಯಾಯ ಎಂದು ರೈತರ ಆಕ್ರೋಶ

Public TV
2 Min Read

ಹಾಸನ: ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ ಆದರೆ ಗೊಬ್ಬರ ಖರೀದಿಸಲು ಅವಕಾಶವಿಲ್ಲ ಇದೆಂಥಾ ನ್ಯಾಯ ಎಂದು ಜಿಲ್ಲಾಡಳಿತ ಎಡಬಿಡಂಗಿ ಕ್ರಮದ ಬಗ್ಗೆ ರೈತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಸತ್ತೀಗೌಡ ಎಂಬ ರೈತರೊಬ್ಬರು ವೀಡಿಯೋ ಮೂಲಕ ಮಾತನಾಡಿ, ಮದ್ಯದಂಗಡಿ ತೆರೆಯಲು ಅವಕಾಶ ನೀಡಿ, ಅಗತ್ಯ ವಸ್ತು ಖರೀದಿಸಲು ಅವಕಾಶ ನೀಡದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶಿಕಾರಿಗೆ ತೆರಳಿದ್ದ ಗೆಳೆಯರ ನಡುವೆ ಗಲಾಟೆ- ಕಾಲಿಗೆ ಗುಂಡು ಹೊಡೆದ ಸ್ನೇಹಿತ

ರೈತರಿಗೆ ಬಹುಮುಖ್ಯವಾಗಿ ಬೇಕಾದ ಗೊಬ್ಬರದಂಗಡಿ, ಬಿತ್ತನೆ ಬೀಜದ ಅಂಗಡಿಗಳನ್ನು ಬಾಗಿಲು ಮುಚ್ಚಿಸಲಾಗಿದೆ. ಆದರೆ ವೈನ್ ಶಾಪ್ ಗಳನ್ನು ತೆರೆಯಲು ರಾಜಾರೋಷವಾಗಿ ಅವಕಾಶ ಕಲ್ಪಿಸಿದ್ದಾರೆ. ನಿಮ್ಮದು ಅದೆಂಥ ಸರ್ಕಾರ, ನಿಮಗೆ ಮಾನ ಮರ್ಯಾದೆ ಇಲ್ಲ. ಮುಂಗಾರು ಸಮಯದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿ, ರೈತರಿಗೆ ಬಹುಮುಖ್ಯವಾಗಿ ಬೇಕಾದ ಕೃಷಿ ಚಟುವಟಿಕೆ ಅಂಗಡಿಗಳನ್ನು ಬಾಗಿಲು ಹಾಕಿಸಿದ್ದೀರಲ್ಲ, ನಿಮಗೆ ನಾಚಿಕೆಯಾಗಬೇಕು ಎಂದು ಬಾಗಿಲು ತೆರೆದಿರುವ ಮದ್ಯದಂಗಡಿ ಮತ್ತು ಬಾಗಿಲು ಹಾಕಿರುವ ಗೊಬ್ಬರದಂಗಡಿ ಎರಡರ ಮುಂದೆಯೂ ನಿಂತು ಕಿಡಿಕಾರಿದ್ದಾರೆ.

ಏಳು ದಿನಗಳ ಕಾಲ ಲಾಕ್‍ಡೌನ್
ಇಂದಿನಿಂದ ಏಳು ದಿನಗಳ ಕಾಲ ಹಾಸನ ಜಿಲ್ಲೆ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಏಳು ದಿನಗಳ ಲಾಕ್ ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ. ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಿಗೆ ಮಾತ್ರ ಅವಕಾಶ ನೀಡಿದೆ. ಪ್ರತಿ ದಿನ ಆಹಾರ, ಹಣ್ಣು, ತರಕಾರಿ ಮತ್ತು ಎಲ್ಲಾ ದಿನಸಿ ಅಗತ್ಯ ವಸ್ತುಗಳು ಹೋಂ ಡೆಲಿವರಿಗೆ ಮಾತ್ರ ವಿನಾಯಿತಿ ಕಲ್ಪಿಸಲಾಗಿದೆ. ಉಳಿದಂತೆ ವೈದ್ಯಕೀಯ ಸೇವೆ, ನ್ಯಾಯಬೆಲೆ ಅಂಗಡಿ, ಹಾಲಿನಬೂತ್ ಗಳನ್ನು ಪ್ರತಿ ದಿನ ತೆರೆಯಲು ಅನುಮತಿ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಸೋಮವಾರವಾದ್ದರಿಂದ ಅಗತ್ಯ ವಸ್ತುಗಳನ್ನು ಕೊಳ್ಳಲು ಹಳ್ಳಿಯಿಂದ ಜನ ಆಗಮಿಸಿದ್ದರು. ಆದರೆ ಗ್ರಾಮೀಣ ಭಾಗದ ಜನರನ್ನು ಪಟ್ಟಣದ ಹೊರಗಡೆಯೇ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದು, ಇಂದಿನಿಂದ ಜೂನ್ 14 ರವರೆಗೆ ಸಂಪೂರ್ಣ ಲಾಕ್‍ಡೌನ್ ಇದೆ, ಮನೆಗೆ ವಾಪಸ್ ಹೋಗಿ ಎಂದಿದ್ದಾರೆ. ಲಾಕ್ ಡೌನ್ ಮುಂದುವರಿಕೆ ಬಗ್ಗೆ ಅರಿವಿಲ್ಲದ ಜನರು ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಚನ್ನರಾಯಪಟ್ಟಣದಲ್ಲಿ ನಡೆಯಿತು. ಚನ್ನರಾಯಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಒಂದು ವಾರಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಿದ್ದೀರಿ. ಈ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಲು ವಿಫಲರಾಗಿದ್ದೀರಿ. ನಮ್ಮ ಬಳಿ ದಿನನಿತ್ಯದ ವಸ್ತುಗಳೂ ಇಲ್ಲ. ಸೋಮವಾರ ಖರೀದಿಸಲು ಅವಕಾಶ ಇದೆ ಎಂದು ಕೊಂಡಿದ್ದೆವು ಈಗ ಏನು ಮಾಡಬೇಕು ಎಂದು ಜನಸಾಮಾನ್ಯರು ಆಕ್ರೋಶ ಹೊರಹಾಕಿದರು. ಹಾಸನದಲ್ಲಿ ಬೆಳಿಗ್ಗೆ 7.30 ರಿಂದಲೇ ಬ್ಯಾಂಕ್‍ಗಳ ಮುಂದೆ ಜನರು ಕ್ಯೂ ನಿಂತಿದ್ದರು. ತರಕಾರಿ ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಹೆಚ್ಚಿತ್ತು.

Share This Article
Leave a Comment

Leave a Reply

Your email address will not be published. Required fields are marked *