ಹಾಸನದಲ್ಲಿ ಮತ್ತೆ ನಾಲ್ವರು ಪೊಲೀಸರಿಗೆ ಕೊರೊನಾ- ಬೆಂಗ್ಳೂರಲ್ಲಿ ಎಎಸ್‍ಐಗೆ ಸೋಂಕು?

Public TV
2 Min Read

ಬೆಂಗಳೂರು/ಹಾಸನ: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ತನ್ನ ಕಬಂಧಬಾಹುವನ್ನ ಬಾಚ್ತಿದ್ದು ರಾಜ್ಯ ರಕ್ಷಣೆಯ ಹೊಣೆ ಹೊತ್ತಿರುವ ಪೊಲೀಸರ ಬೆನ್ನೇರಿದೆ. ರಾಜ್ಯದಲ್ಲಿ ಪೊಲೀಸರಿಗೂ ಸೋಂಕು ಹಬ್ಬುತ್ತಿದ್ದು, ಗೃಹ ಇಲಾಖೆಗೆ ಹೊಸ ಸವಾಲು ಎದುರಾಗಿದೆ.

ಬೆಂಗಳೂರಲ್ಲಿ ಮತ್ತಷ್ಟು ಪೊಲೀಸರಿಗೆ ಕೊರೊನಾ ಸೋಂಕು ಹಬ್ಬಿರುವ ಆತಂಕ ಎದುರಾಗಿದೆ. ಬೆಂಗಳೂರಲ್ಲಿ ಸೇವೆಯಲ್ಲಿರುವ ಆನೇಕಲ್ ಮೂಲದ ಎಎಸ್‍ಐಗೆ ಕೊರೊನಾ ಸೋಂಕು ಹಬ್ಬಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಈ ಪೊಲೀಸ್ ಅಧಿಕಾರಿಗೆ ಕೊರೊನಾ ಹೇಗೆ ಬಂತು ಅನ್ನೋ ಮಾಹಿತಿಯನ್ನ ಆರೋಗ್ಯ ಇಲಾಖೆ ಸಂಗ್ರಹಿಸ್ತಿದೆ.

ಇತ್ತ ಹಾಸನ ಜಿಲ್ಲೆಯ ಹೊಳೇನರಸೀಪುರದಲ್ಲಿ ಪಿಎಸ್‍ಐ ಮತ್ತು ಮೂವರು ಕಾನ್ಸ್ ಸ್ಟೇಬಲ್‍ಗೆ ಕೊರೊನಾ ಸೋಂಕು ಹಬ್ಬಿದೆ. ಈ ಪೊಲೀಸರು ವಾಸವಿದ್ದ ಏರಿಯಾವನ್ನ ಸೀಲ್‍ಡೌನ್ ಮಾಡಲಾಗಿದೆ. ಈ ನಾಲ್ವರು ಪೊಲೀಸರನ್ನು ಮಹಾರಾಷ್ಟ್ರದ ಗಡಿಭಾಗ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಅಂತಾರಾಜ್ಯ ಗಡಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಮೇ 23ರಂದು ನಿಪ್ಪಾಣಿಯಿಂದ ಬಂದ ಇವರನ್ನು ತಕ್ಷಣವೇ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಈ ನಾಲ್ವರು ಪೊಲೀಸರಲ್ಲಿ ಒಬ್ಬರು ಪಿಡಬ್ಲ್ಯೂಡಿ ಕ್ವಾಟ್ರಸ್‍ನಲ್ಲೂ, ಇನ್ನಿಬ್ಬರು ಪೊಲೀಸ್ ಕ್ವಾಟ್ರಸ್‍ನಲ್ಲೂ ಮತ್ತೊಬ್ಬರು ಹೌಸಿಂಗ್ ಬೋರ್ಡ್ ನಲ್ಲಿ ವಾಸವಿದ್ದರು. ಈ ಮೂರು ಏರಿಯಾಗಳನ್ನು ಈಗ ಸೀಲ್‍ಡೌನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಸೇವೆಯಲ್ಲಿದ್ದ ಹಾಸನ ಮೂಲದ ಕಾನ್ಸ್ ಸ್ಟೇಬಲ್‍ಗೆ ಕೊರೊನಾ ಕಾಣಿಸಿಕೊಂಡಿತ್ತು. ಈಗ ಆ ಪೊಲೀಸ್ ಜೊತೆಗೆ ಸಂಪರ್ಕದಲ್ಲಿದ್ದ ಮತ್ತಿಬ್ಬರಿಗೆ ಕೊರೊನಾ ಸೋಂಕು ಹಬ್ಬಿದೆ ಎನ್ನಲಾಗ್ತಿದೆ. ಹೀಗಾಗಿ ಗಾಡೇನಹಳ್ಳಿಯ ಪೊಲೀಸ್ ತರಬೇತಿ ಶಾಲೆಯನ್ನ ಸೀಲ್‍ಡೌನ್ ಮಾಡಲಾಗಿದೆ. ಈ ಶಾಲೆಗೆ ಕೊರೊನಾ ಪಾಸಿಟಿವ್ ಬರೋದಕ್ಕೂ ಮೊದಲು ಪೊಲೀಸ್ ಭೇಟಿ ನೀಡಿದ್ದರು.

8 ಜಿಲ್ಲೆಗಳಲ್ಲಿ ಪೊಲೀಸರಿಗೆ ಸೋಂಕು:
ರಾಜ್ಯದ 8 ಜಿಲ್ಲೆಗಳಲ್ಲಿ ಪೊಲೀಸರಿಗೂ ಕೊರೊನಾ ಹಬ್ಬಿರುವುದು ಆತಂಕಕ್ಕೀಡುಮಾಡಿದೆ. ಇದರಲ್ಲಿ ಹಾಸನದಲ್ಲಿ ಒಟ್ಟು 7 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ಹಬ್ಬಿದೆ. ಉಡುಪಿಯಲ್ಲಿ ಎಎಸ್‍ಐ ಮತ್ತು ಮೂವರು ಪೊಲೀಸ್ ಕಾನ್ಸ್ ಸ್ಟೇಬಲ್‍ಗೆ ವೈರಸ್ ವಕ್ಕರಿಸಿದೆ. ಬೆಂಗಳೂರಲ್ಲಿ ಟ್ರಾಫಿಕ್ ಕಾನ್ಸ್ ಸ್ಟೇಬಲ್ ಮತ್ತು ಸಿಎಆರ್ ಕಾನ್ಸ್ ಸ್ಟೇಬಲ್‍ಗೆ ಸೋಂಕು ದೃಢಪಟ್ಟಿದೆ.

ದಕ್ಷಿಣ ಕನ್ನಡ, ಮಂಡ್ಯ, ದಾವಣಗೆರೆ, ಕಲಬುರಗಿಯಲ್ಲೂ ಕಾನ್ಸ್ ಸ್ಟೇಬಲ್‍ಗೆ ಕೊರೊನಾ ವಕ್ಕರಿಸಿದೆ. ಬಾಗಲಕೋಟೆಯಲ್ಲಿ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು ಹಬ್ಬಿತ್ತು. ಆ ನಾಲ್ವರು ಗುಣಮುಖರಾಗಿದ್ದಾರೆ ಎನ್ನುವುದು ನೆಮ್ಮದಿಯ ಸಂಗತಿ. ಕಂಟೈನ್ಮೆಂಟ್ ಝೋನ್, ಚೆಕ್ ಪೋಸ್ಟ್ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ನಿಯೋಜನೆಗೊಂಡಿರುವ ಪೊಲೀಸರಿಗೆ ಕೊರೊನಾ ಹಬ್ಬಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *