ಹಾಸನದಲ್ಲಿ ಡ್ರೋನ್ ಸರ್ವೇ- ಹದಿನೈದು ದಿನದ ಕೆಲಸ ಆರು ಗಂಟೆಯಲ್ಲಿ ಮುಕ್ತಾಯ

Public TV
1 Min Read

– ಅರ್ಧ ಗಂಟೆಯಲ್ಲಿ 2 ಸಾವಿರ ಎಕರೆ ಸರ್ವೇ

ಹಾಸನ: ಹತ್ತು ಮನೆಗಿಂತ ಹೆಚ್ಚು ಜನವಸತಿ ಇರುವ ಜಾಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಡ್ರೋನ್ ಮೂಲಕ ಸರ್ವೇ ಮಾಡಲಾಗುತ್ತಿದ್ದು, ಇದರಿಂದ ಸಮಯ ಉಳಿತಾಯವಾಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಅತ್ಯಾಧುನಿಕ ಡ್ರೋನ್ ಮೂಲಕ ದಿನಕ್ಕೆ 5 ರಿಂದ ಎಂಟು ಹಳ್ಳಿ ಸರ್ವೇ ಮಾಡಿ ಮುಗಿಸಬಹುದು. 10 ರಿಂದ 15 ದಿನದಲ್ಲಿ ಮಾಡಬಹುದಾದ ಕೆಲಸವನ್ನು ಡ್ರೋನ್ ಮೂಲಕ ಕೇವಲ ಐದು ಗಂಟೆಯಲ್ಲಿ ಮಾಡಿ ಮುಗಿಸಬಹುದಾಗಿದೆ. ಅರ್ಧ ಗಂಟೆಯಲ್ಲಿ ಸುಮಾರು 2 ಸಾವಿರ ಎಕರೆ ಸರ್ವೇ ಮಾಡಬಹುದಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದೆ. ಅಲ್ಲದೆ ಸಾರ್ವಜನಿಕರಿಗೂ ಒಂದೇ ಕಾರ್ಡ್ ನಲ್ಲಿ ತಮ್ಮ ಆಸ್ತಿಯ ಎಲ್ಲ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

ಹವಾಮಾನ ವ್ಯತ್ಯಾಸ ಇದ್ದಾಗ ಡ್ರೋನ್ ಹಾರಿಸಿ ಸರ್ವೇ ಮಾಡಲು ಸಾಧ್ಯ ಆಗಲ್ಲ. ಡ್ರೋನ್ ಸರ್ವೇ ನಂತರ ಪಂಚಾಯಿತಿಯಲ್ಲಿರುವ ದಾಖಲೆ, ಆನ್‍ಗ್ರೌಂಡ್ ದಾಖಲೆ ಎಲ್ಲವನ್ನೂ ಪರಿಶೀಲನೆ ನಡೆಸಿ ನಂತರ ಆಸ್ತಿ ಕಾರ್ಡ್ ನೀಡಲಾಗುವುದು. ಹಾಸನದಲ್ಲಿ ಇನ್ನೂ ಐದಾರು ತಿಂಗಳು ಡ್ರೋನ್ ಸರ್ವೆ ಕಾರ್ಯ ನಡೆಯಲಿದೆ ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ.

ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಆರ್‍ಡಿಪಿಆರ್ ಇಲಾಖೆ, ಕಂದಾಯ ಇಲಾಖೆ, ಸರ್ವೇ ಆಫ್ ಇಂಡಿಯಾ ಮೂರು ಇಲಾಖೆಯ ಸಹಭಾಗಿತ್ವದೊಂದಿಗೆ ಹಾಸನದಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಡ್ರೋನ್ ಮೂಲಕ ಜನವಸತಿ ಪ್ರದೇಶದ ಫೋಟೊಗ್ರಫಿಕ್ ಇಮೇಜ್ ತೆಗೆದುಕೊಂಡು ನಕ್ಷೆ ತಯಾರಿಸಲಾಗುತ್ತೆ. ನಂತರ ಪ್ರಾಪರ್ಟಿ ಕಾರ್ಡ್ ಜನರೇಟ್ ಮಾಡುತ್ತಾರೆ. ಇದನ್ನು ಜನರಿಗೆ ನೀಡುತ್ತಾರೆ ಎಂದು ತಿಳಿಸಿದರು.

ಆಸ್ತಿ ಕಾರ್ಡನ್ನು ಪರಿಶೀಲನೆ ಮಾಡಿ, ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುತ್ತೆ. ಇದರಿಂದಾಗಿ ಸಾರ್ವಜನಿಕರಿಗೆ ಅವರ ಒಡೆತನದ ನಕ್ಷೆ ಮತ್ತು ದಾಖಲಾತಿ ಒಂದೇ ಕಾರ್ಡ್‍ನಲ್ಲಿ ಸಿಗಲಿದೆ.ವಿಭಾಗ ಮಾಡಿಕೊಳ್ಳುವಾಗ, ಬ್ಯಾಂಕ್‍ಗಳಲ್ಲಿ ಲೋನ್ ಪಡೆಯುವಾಗ ಒಂದೇ ಕಾರ್ಡ್‍ನಲ್ಲಿ ಎಲ್ಲ ಮಾಹಿತಿ ಸಿಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *