ಹಾವೇರಿಯ ಜಂಗಮನಕೊಪ್ಪದಲ್ಲಿ ಹಾಲು ಸಂಸ್ಕರಣಾ ಡೇರಿ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ: ಬೊಮ್ಮಾಯಿ

Public TV
1 Min Read

-15 ಕೋಟಿ ರೂಪಾಯಿ ಅನುದಾನ, ಪಿಪಿಪಿ ಮಾದರಿಯಲ್ಲಿ ಅನುಷ್ಠಾನ

ಬೆಂಗಳೂರು : ಧಾರವಾಡ ಹಾಲು ಒಕ್ಕೂಟದ ವತಿಯಿಂದ ಹಾವೇರಿ ಜಿಲ್ಲೆಯ ಜಂಗಮನಕೊಪ್ಪ ಗ್ರಾಮದಲ್ಲಿ 1 ಲಕ್ಷ ಲೀಟರ್ ಸಾಮಥ್ರ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕವನ್ನು 90 ಕೋಟಿ ರೂಪಾಯಿ ವೆಚ್ಚದಲ್ಲಿ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾವೇರಿ ಜಿಲ್ಲೆಯ ಹಾಲು ಉತ್ಪಾದಕರ ಬಹುದಿನಗಳ ಈ ಬೇಡಿಕೆಗೆ ಅನುಮೋದನೆ ದೊರೆಯಿತು ಎಂದು ತಿಳಿಸಿದರು.

ಧಾರವಾಡ ಹಾಲು ಒಕ್ಕೂಟ ಮಹಾಮಂಡಳಿ ವ್ಯಾಪ್ತಿಯಲ್ಲಿ ನಾಲ್ಕು ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿ ಒಟ್ಟು 45,000 ಹಾಲು ಉತ್ಪಾದಕ ಸದಸ್ಯರಿದ್ದಾರೆ. ಆದರೆ ಹಾವೇರಿ ಜಿಲ್ಲೆಯಲ್ಲಿ 22,000 ಹಾಲು ಉತ್ಪಾದಕರಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.

ಮುಂದಿನ ಐದು ವರ್ಷಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ಶೇ.20ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ. ಆದ್ದರಿಂದ ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮಥ್ರ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕದ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಮಹತ್ವಾಕಾಂಕ್ಷಿ ಯೋಜನೆಗೆ ಸಚಿವರಿಂದ ಇಂದು ಅನುಮತಿ ದೊರೆತಿದೆ ಎಂದು ಬಸವರಾಜ್ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.

ಹಾಲು ಸಂಸ್ಕರಣೆ ಹಾಗೂ ಪ್ಯಾಕಿಂಗ್ ಘಟಕ ಸ್ಥಾಪನೆ ಹಾವೇರಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಆಗಿತ್ತು. ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಈ ಯೋಜನೆ ಸಹಕಾರಿಯಾಗಲಿದೆ. ಪಿಪಿಪಿ ಮಾದರಿಯ ಈ ಯೋಜನೆಗೆ ಸರ್ಕಾರದ ವತಿಯಿಂದ 15 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *