ಹಾವೇರಿಯಲ್ಲಿ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ, ವಾರಕ್ಕೊಮ್ಮೆ ಮಾನಿಟರ್: ಬೊಮ್ಮಾಯಿ

Public TV
2 Min Read

ಹಾವೇರಿ: ಹವಾಮಾನ ಇಲಾಖೆಯ ವರದಿಯಂತೆ ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ. ಈಗಾಗಲೇ ಭಾರೀ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಂಗಾರು ಬಿತ್ತನೆ ಕೃಷಿ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹವಾಮಾನ ಇಲಾಖೆಯ ಮಾಹಿತಿಯಂತೆ ಈ ವರ್ಷ ಮುಂಗಾರು ಮಳೆ ಶೇ.4ರಷ್ಟು ಕಡಿಮೆಯಾಗಲಿದೆ ಎಂದು ಮುನ್ಸೂಚನೆ ದೊರೆತಿದೆ. ಆದಾಗ್ಯೂ ವಾಡಿಕೆ ಮಳೆಯಂತೆ ಜಿಲ್ಲೆಯಲ್ಲಿ ಮುಂಗಾರಿಗೆ ಅಗತ್ಯವಾದ ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರಗಳು ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಕುರಿತಂತೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಂಗಾರು ಬಿತ್ತನೆ ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿ 15 ರಿಂದ 18 ಸಾವಿರ ಮೆಟ್ರಿಕ್ ಡಿಎಪಿ ಗೊಬ್ಬರ ಬೇಡಿಕೆ ಇದೆ. ಈಗಾಗಲೇ ಅಂದಾಜು 15 ಸಾವಿರ ಮೆಟ್ರಿಕ್ ಟನ್‍ನಷ್ಟು ಗೊಬ್ಬರ ದಾಸ್ತಾನು ಇದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ನಿಗದಿಯಾದ ಗೊಬ್ಬರ ಹಂಚಿಕೆಯನ್ನು ತಿಂಗಳ ಮೊದಲವಾರದಲ್ಲಿ ಪೂರೈಕೆ ಮಾಡಲು ಈಗಾಗಲೇ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದರಿಂದ ಈ ವರ್ಷ ಡಿಎಪಿ ಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಮುಂಗಾರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ನಿರ್ವಹಣೆ ಕುರಿತು ಪ್ರತಿ ವಾರ ಮಾನಿಟರ್ ಮಾಡಲಾಗುವುದು ಎಂದು ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ಮೂರು ವರ್ಷದ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ 2018ರಲ್ಲಿ 14,653, 2019ರಲ್ಲಿ 16,291, 2020ರಲ್ಲಿ 20,312 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದೆ. ಪ್ರಸಕ್ತ ಮುಂಗಾರು ಸಾಲಿನಲ್ಲಿ 26,635 ಮೆಟ್ರಿಕ್ ಟನ್ ಹಂಚಿಕೆಯಾಗಿದೆ. ಈ ವರ್ಷ 6,323 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ. ಮೇ ಕೊನೆಯವರೆಗೆ 10,450 ಮೆಟ್ರಿಕ್ ಟನ್ ಡಿಎಪಿ ಜಿಲ್ಲೆಗೆ ಪೂರೈಕೆಯಾಗಿದ್ದು, 5,960 ಮೆಟ್ರಿಕ್ ಟನ್ ಹಳೆಯ ದಾಸ್ತಾನು ಸೇರಿದಂತೆ ಮೇ ತಿಂಗಳಲ್ಲಿ 9,200 ಮೆಟ್ರಿಕ್ ಟನ್ ಸೇರಿದಂತೆ 15,161 ಮೆಟ್ರಿಕ್ ಡಿಎಪಿ ಗೊಬ್ಬರ ಬಳಕೆಗೆ ಲಭ್ಯವಿದೆ ಎಂದು ವಿವರಿಸಿದರು.

ಈಗಾಗಲೇ 5,745 ಮೆಟ್ರಿಕ್ ಟನ್ ಗೊಬ್ಬರ ವಿತರಣೆಗೆ ಕ್ರಮ ವಹಿಸಲಾಗಿದೆ. ಪ್ರಸ್ತುತ 9,416 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಮಹಾ ಮಂಡಳ ನಿಯಮಿತ(ಕೆಎಸ್‍ಸಿಎಂಎಫ್)ನಲ್ಲಿ 2,626 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಅಂದಾಜು 14,657 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಲಭ್ಯವಿದೆ. ಜೂನ್ ತಿಂಗಳಲ್ಲಿ ಜಿಲ್ಲೆಗೆ ನಿಗದಿಯಾದ 5,242 ಮೆಟ್ರಿಕ್ ಟನ್ ಹಾಗೂ ಜುಲೈ ತಿಂಗಳಿಗೆ ನಿಗದಿಯಾದ ಕೋಟವನ್ನು ತಿಂಗಳ ಆರಂಭದಲ್ಲಿ ನೀಡಿದರೆ ನಮಗೆ ಜುಲೈವರೆಗೆ 18 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಲಭ್ಯವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈ ವರ್ಷ ಡಿಎಪಿ ಹೊರತು ಕಾಂಪ್ಲೆಕ್ಸ್, ಎಂಒಪಿ ಹಾಗೂ ಯೂರಿಯಾ ಸೇರಿದಂತೆ 98,425 ಮೆಟ್ರಿಕ್ ಟನ್ ಗೊಬ್ಬರ ಹಂಚಿಕೆಯಾಗಿದೆ. 33,635 ಕ್ವಿಂಟಲ್ ಬಿತ್ತನೆ ಬೀಜ ಹಂಚಿಕೆಯಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *