ಹಾಲು ಕುಡಿಯೋ ವಯಸ್ಸಲ್ಲಿ ಹಸಿವಿನಿಂದ ನರಳಾಟ – 20 ದಿನದಲ್ಲಿ 10ಕ್ಕೂ ಹೆಚ್ಚು ಕರುಗಳು ಸಾವು

Public TV
1 Min Read

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೆಲವು ರೈತರು ತಮ್ಮ ಮನೆಗಳಲ್ಲಿ ಜನಿಸಿದ ಗಂಡು ಕರುಗಳನ್ನು ಹುಟ್ಟಿದ ಮೂರ್ನಾಲ್ಕು ದಿನಕ್ಕೆ ತಂದು ಕೆ.ಆರ್.ಪೇಟೆ ತಾಲೂಕಿನ ಗವಿರಂಗನಾಥ ಸ್ವಾಮಿ ದೇವಾಲಯದ ಬಳಿ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಹಾಲು ಕುಡಿಯುವ ಎಳೆಯ ವಯಸ್ಸಿನ ಕರುಗಳು ಹಸಿವಿನಿಂದ ನರಳಿ ನರಳಿ ಸಾಯುತ್ತಿವೆ.

ಗವಿರಂಗನಾಥ ಸ್ವಾಮಿ ದೇವಾಲಯ ಪುರಾಣ ಪ್ರಸಿದ್ಧಿ ಪಡೆದುಕೊಂಡಿದ್ದು, ಇಲ್ಲಿ ಹರಕೆ ಹೊತ್ತುಕೊಂಡ್ರೆ ಇಷ್ಟಾರ್ಥ ನೆರವೇರುತ್ತವೆ ಎಂಬ ನಂಬಿಕೆ ಇದೆ. ಅದರಂತೆ ಹರಕೆ ಹೊತ್ತವರು ದೇವರಲ್ಲಿ ಬೇಡಿಕೊಂಡ ಕಾರ್ಯ ಸಿದ್ಧಿಸಿದ ಬಳಿಕ ಕರುಗಳನ್ನು ಇಲ್ಲಿಗೆ ತಂದು ಬಿಟ್ಟೋಗುವ ಪದ್ಧತಿ ಮಾಡಿಕೊಂಡು ಬರಲಾಗುತ್ತಿದೆ. ತಮ್ಮ ಮನೆಯಲ್ಲಿ ಜನಿಸಿದ ಗಂಡು ಕರು ಅಥವಾ ಹೆಣ್ಣು ಕರುಗಳನ್ನು ಕೆಲವು ತಿಂಗಳು ಸಾಕಿ ಮೇವು ತಿನ್ನುವುದನ್ನು ಕಲಿತ ಬಳಿಕ ತಂದು ದೇವಾಲಯದ ಬಳಿ ಬಿಡುತ್ತಿದ್ದರು. ಆದರೆ ಇದೀಗ ಗಂಡು ಕರುಗಳನ್ನಷ್ಟೇ ಬಿಟ್ಟೋಗುತ್ತಿದ್ದಾರೆ. ಅದರಲ್ಲೂ ಎಳೆಯ ಕರುಗಳನ್ನು ಬಿಟ್ಟೋಗುತ್ತಿರುವುದರಿಂದ ಅವುಗಳು ಪೋಷಣೆ ಇಲ್ಲದೇ ಸಾಯುತ್ತಿವೆ.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ಗಂಡು ಕರುಗಳನ್ನು ತಂದು ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ 20 ದಿನಗಳಲ್ಲಿ 10ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ನಾರಾಯಣಗೌಡ, ಯಾವುದೇ ಕಾಯ್ದೆಯನ್ನೂ ಒಂದೇ ಬಾರಿಗೆ ಜಾರಿಗೊಳಿಸಲು ಆಗಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ಮಂಡ್ಯದಲ್ಲಿ ಗಂಡು ಕರುಗಳ ಸಾವಿನ ಬಗ್ಗೆ ಗಮನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ದೇವಸ್ಥಾನದ ಬಳಿ ಗೋ ಶಾಲೆ ಆರಂಭಿಸಿ ಇಲ್ಲಿಗೆ ತಂದು ಬಿಡುವ ಕರುಗಳನ್ನ ರಕ್ಷಣೆ ಮಾಡುವಂತಹ ಕೆಲಸಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಬೇಕೆಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *