ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

Public TV
2 Min Read

ಮುಂಬೈ: ಬಾಲಿವುಡ್‍ನ ಅದ್ಭುತ ನಟ ಇರ್ಫಾನ್ ಖಾನ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳು, ಜನರಿಂದ ಅವರು ಗಳಿಸಿದ ಪ್ರೀತಿ ಸದಾ ಜೀವಂತ. ಇದಕ್ಕೆ ಉದಾಹರಣೆ ಎಂಬಂತೆ ಮಹಾರಾಷ್ಟ್ರದಲ್ಲಿ ಗ್ರಾಮವೊಂದಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಟ್ಟು ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿ ಪ್ರೀತಿ ಮೆರೆಯಲಾಗಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದಲ್ಲಿ ಪ್ರತಿಯಚಾ ವಾಡಾ ಗ್ರಾಮಸ್ಥರು ಇರ್ಫಾನ್ ಖಾನ್ ಅವರು ಮಾಡಿರುವ ಸಹಾಯಕ್ಕೆ ಗೌರವ ಸಲ್ಲಿಸಿದ್ದಾರೆ. ಇರ್ಫಾನ್ ಖಾನ್ ಬದುಕಿದ್ದಾಗ ಸಾಕಷ್ಟು ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ನೆರವಾಗಿದ್ದರು. ಹಲವು ಹಳ್ಳಿಗಳಿಗೆ, ಬಡ ಜನರಿಗೆ ಸಹಾಯ ಹಸ್ತಚಾಚಿದ್ದರು. ಮರಾಠಿಯಲ್ಲಿ ‘ಹೀರೋ ಚಿ ವಾಡಿ’ ಎಂದರೆ ಹೀರೋನ ನೆರೆಹೊರೆಯವರು ಎಂದರ್ಥ. ಹೀಗಾಗಿ ಅವರು ಮಾಡಿರುವ ಸಹಾಯಕ್ಕೆ ಪ್ರತಿಯಚಾ ವಾಡಾ ಗ್ರಾಮಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

ಇಗತ್ಪುರು ತಾಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪ ಇರ್ಫಾನ್ ಫಾರ್ಮ್ ಅವರ ಫಾರ್ಮ್ ಹೌಸ್ ಕೂಡ ಇದೆ. ಆದರೆ ಈ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದನ್ನು ಅರಿತ ಇರ್ಫಾನ್ ಅವರು ಅಲ್ಲಿನ ನೆರೆ ಹೊರೆಯ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಪ್ರತಿಯಚಾ ವಾಡ ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲೆಂದು ಅಂಬುಲೆನ್ಸ್, ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ, ರೇನ್ ಕೋಟ್ ಮತ್ತು ಸ್ವೆಟರ್ ಗಳನ್ನು ನೀಡಿದ್ದರು. ಇರ್ಫಾನ್ ಅವರು ಮಾಡಿರುವ ಸಹಾಯವನ್ನು ಸ್ಮರಿಸಲು, ಅವರ ಮೇಲಿಟ್ಟಿರುವ ಪ್ರೀತಿಯಿಂದ ಗ್ರಾಮಸ್ಥರು ತಮ್ಮ ಹಳ್ಳಿಯ ಹೆಸರನ್ನು ‘ಹೀರೋ ಚಿ ವಾಡಿ` ಎಂದು ಬದಲಾಯಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲೂ ನಟಿಸಲಿದ್ದರು ಇರ್ಫಾನ್

ಬಹಳ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಏಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಾಲಿವುಡ್‍ನಲ್ಲಿ ಹೀರೋ ಮತ್ತು ಪೋಷಕ ನಟ ಯಾವುದೇ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಇರ್ಫಾನ್ ಅವರು, ಹಾಲಿವುಡ್‍ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 1988ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇರ್ಫಾನ್ ನಂತರ ನೂರಾರು ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಇವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *