– ಮಾರುಕಟ್ಟೆಗೆ ಬರುವ ಮುನ್ನ ಬೆಂಕಿಗೆ ಆಹುತಿ
ಚಿತ್ರದುರ್ಗ: ಕೈಗೆ ಬಂದಿರುವ ಮೆಕ್ಕೆಜೋಳದ ಬೆಳೆ ಮಾರುಕಟ್ಟೆಗೆ ಬರುವ ಮುನ್ನವೇ ಕಿಡಿಗೇಡಿಗಳು ಹಳೆ ವೈಷಮ್ಯಕ್ಕೆ ಬೆಂಕಿ ಇಟ್ಟು ಬೆಳೆ ನಾಶ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದ ರೈತ ಶಂಭುಲಿಂಗಪ್ಪ ಅವರು ಬೆಳೆದಿದ್ದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳದ ರಾಶಿಗೆ ಬೆಂಕಿ ಇಡಲಾಗಿದ್ದೂ, ಮೆಕ್ಕೆಜೋಳದ ತೆನೆಗಳು ಬೆಂಕಿಯಲ್ಲಿ ಹೊತ್ತಿ ಉರಿದಿದೆ.
ನೋಡ ನೋಡುತ್ತಲೇ ಸುಟ್ಟು ಕರಕಲಾದ ಮೆಕ್ಕೆ ಜೊಳದ ರಾಶಿ ಕಂಡು ಕಷ್ಟಪಟ್ಟು ಬೆಳೆದ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಮೆಕ್ಕೆಜೋಳ ಬೆಳೆಯಲು ಮಾಡಿದ್ದ ಸಾಲ ಹಾಗೂ ಕಳೆದ ಮೂರು ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡಲು ಫೈನಾನ್ಸ್ ನಲ್ಲಿ ತರಲಾಗಿದ್ದ ಸಾಲವನ್ನು ತೀರಿಸಬೇಕೆಂಬ ನಿರೀಕ್ಷೆಯಲ್ಲಿದ್ದ ರೈತ ಶಂಭುಲಿಂಗಪ್ಪ ಅವರ ಬೆಳೆದಿರುವ ಬಳೆಗೆ ಕಿಡಿಗೇಡಿಗಳು ಮಾಡಿರುವ ಅವಾಂತರದಿಂದ ಬರಸಿಡಿಲು ಬಡಿದಂತಾಗಿದೆ. ಆದರೆ ಈ ರಾಶಿಯ ಪಕ್ಕದಲ್ಲೇ ಇರುವ ಇವರ ಸಹೋದರನ ಮೆಕ್ಕೆಜೋಳದ ರಾಶಿಗೆ ಮಾತ್ರ ಯಾವುದೇ ಹಾನಿಯಾಗಿಲ್ಲ.
ಇವರು ಈ ವರ್ಷ ಉತ್ತಮವಾಗಿ ಸುರಿದ ಮಳೆಯಿಂದಾಗಿ 7 ಟ್ಯಾಕ್ಟರ್ ಲೋಡ್ ನಷ್ಟು ಮೆಕ್ಕೆಜೋಳ ಬೆಳೆದಿದ್ದರು. ಈ ಬಾರಿ ಅದನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಕು ಎಂದಿದ್ದರು. ಆದರೆ ಇವರ ಮೇಲಿನ ಹಳೇ ವೈಷಮ್ಯದಿಂದಾಗಿ ಯಾರೋ ಕಿಡಿಗೇಡಿಗಳು ಮನೆಯ ಮುಂದೆ ಹಾಕಲಾಗಿದ್ದ ಮೆಕ್ಕೆಜೋಳದ ರಾಶಿಗೆ ಬೆಂಕಿ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.