ಹರುಕು ಬಾಯಿಯಿಂದ ಹಗುರುವಾಗಿ ಮಾತಾಡಬೇಡಿ: ಯತ್ನಾಳ್‍ಗೆ ರೇಣುಕಾಚಾರ್ಯ ಎಚ್ಚರಿಕೆ

Public TV
2 Min Read

– ಯಡಿಯೂರಪ್ಪ ಕುಟುಂಬ ಮಾತ್ರ ನಿಮಗೆ ಕಾಣುತ್ತಾ?

ಶಿವಮೊಗ್ಗ: ನಿಮ್ಮ ಹರುಕು ಬಾಯಿಯಿಂದ ಮುಖ್ಯಮಂತ್ರಿಗಳ ಬಗ್ಗೆ ಹಗುರುವಾಗಿ ಮಾತಾಡಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯತ್ನಾಳ್ ಪದೇ ಪದೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ರೀತಿ ಉದ್ಧಟತನದಿಂದ ವರ್ತಿಸಿದ್ದರಿಂದಲೇ ಈ ಹಿಂದೆ ನಿಮ್ಮನ್ನು ಪಕ್ಷದಿಂದ ಉಚ್ಛಾಟಿಸಿದ್ದು, ಆಗ ಜೆಡಿಎಸ್ ಸೇರಿಕೊಂಡು ದೇವೇಗೌಡ ಅವರನ್ನು ಹಾಡಿ ಹೊಗಳಿದ್ರಿ. ಹಿಂದುತ್ವ ಎಲ್ಲಿದೆ ನಿಮಗೆ? ನಿಮ್ಮ ಹರುಕು ಬಾಯಿ, ಎಲುಬಿಲ್ಲದ ನಾಲಗೆಯಿಂದ ಹಗುರವಾಗಿ ಮಾತನಾಡ್ತೀರಾ. ಯಡಿಯೂರಪ್ಪ ಅವರ ಕುಟುಂಬ ಮಾತ್ರ ರಾಜಕಾರಣ ಮಾಡುತ್ತಿದೆಯಾ? ಬೇರೆ ಯಾರು ಕುಟುಂಬ ರಾಜಕಾರಣ ಮಾಡುತ್ತಿಲ್ಲವಾ? ಯಡಿಯೂರಪ್ಪ ಮಾತ್ರ ನಿಮ್ಮ ಕಣ್ಣಿಗೆ ಕಾಣುತ್ತಿದೆಯಾ. ನೀವು ನಿಜವಾಗಿಯೂ ಬಿಜೆಪಿ ತತ್ವ ಸಿದ್ಧಾಂತ ಒಪ್ಪಿಕೊಂಡಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂದು ಹೇಳಲು ನೀವ್ಯಾರು? ರಾಜ್ಯದ ಜನ ಬಿಜೆಪಿಗೆ ಮತ ನೀಡಿದ್ದಾರೆ. 117 ಶಾಸಕರು ಬೆಂಬಲಿಸಿದ್ದಾರೆ. ಮೋದಿ, ಅಮಿತ್ ಶಾ ಅಪೇಕ್ಷೆಯಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ದಿವಂಗತ ಅನಂತಕುಮಾರ್, ಈಶ್ವರಪ್ಪ ಅವರು. ಸಿಎಂ ಬದಲಾವಣೆ ಮಾಡಿ ಎನ್ನುವುದಕ್ಕೆ ನೀವು ಯಾರೀ. ಪಕ್ಷಕ್ಕೆ ನಿಮ್ಮ ಕೊಡುಗೆ ಏನು. ನೀವು ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುವುದನ್ನು ಮೊದಲು ಬಿಡಿ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನ ಮಹಾನಾಯಕ, ಬಿಜೆಪಿಯ ಯುವರಾಜರದ್ದು ಎರಡು ಸಿಡಿ ಫ್ಯಾಕ್ಟರಿಗಳಿವೆ: ಯತ್ನಾಳ್

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದಿದ್ದಾರೆ. ಹೀಗಿರುವಾಗ ಅವರ ಹೇಳಿಕೆಗೆ ಮಹತ್ವ ಕೊಡುವುದು ಬೇಡ. ಆದರೂ ಯತ್ನಾಳ್ ಪದೇ ಪದೇ ಇಂತಹ ಹೇಳಿಕೆ ನೀಡುತ್ತಿದ್ದರೆ ವಿಲನ್ ಆಗುತ್ತಾರೆ ಅಷ್ಟೇ ಎಂದರು. ಇದನ್ನೂ ಓದಿ: ಸಿಎಂ ವಿರುದ್ಧ ಗುಡುಗು- ಮಾರ್ಚ್ 25ರ ಸಭೆಯ ರಹಸ್ಯ ಬಿಚ್ಚಿಟ್ಟ ಯತ್ನಾಳ್

Share This Article
Leave a Comment

Leave a Reply

Your email address will not be published. Required fields are marked *