ಹನಿ ನೀರಾವರಿ ಸಬ್ಸಿಡಿಗೆ ರಾಜ್ಯದ ಪಾಲನ್ನ ನೀಡಿ – ಸಿಎಂಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮನವಿ

Public TV
2 Min Read

ಬೆಂಗಳೂರು: ಹನಿ ನೀರಾವರಿ ಸಬ್ಸಿಡಿ ಮುಂದುವರಿಸಲು ಮುಖ್ಯಮಂತ್ರಿಗಳನ್ನು ಕೋರಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆ ಲಭಿಸಿದೆ ಅಂತಾ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಈ ಹಿಂದಿನಂತೆ ಶೇ 90ರಷ್ಟು ಸಬ್ಸಿಡಿ ಮುಂದುವರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ರೈತರಿಗೆ ನೀಡುವ ಶೂನ್ಯ ಬಡ್ಡಿದರದ ಸಾಲವನ್ನು ಪ್ರತಿಯೊಬ್ಬ ಅರ್ಹ ರೈತರಿಗೂ ನೀಡಲು ಮನವಿ ಮಾಡಿದ್ದಾಗಿ ಕೋರಲಾಗಿದೆ. ಸಕ್ಕರೆ ಕಾರ್ಖಾನೆಗಳ ಬಾಕಿ ಬಿಲ್‍ಗಳನ್ನು ಬೇಗನೆ ಪಾವತಿಸಲು ಸೂಚಿಸುವಂತೆ ಕೋರಿದ್ದೇವೆ ಎಂದರು.

ರೈತರ ಉತ್ಪನ್ನಗಳ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸಕಾಲದಲ್ಲಿ ತೆರೆಯುವಂತೆ ವಿನಂತಿಸಲಾಗಿದೆ ಎಂದು ವಿವರಿಸಿದರು. ಅಲ್ಲದೆ ಸಾಮಾಜಿಕ, ವೈದ್ಯಕೀಯ ಮತ್ತು ಆರ್ಥಿಕ ಸುರಕ್ಷೆಗೆ ನಮ್ಮ ಪಕ್ಷ ಗಣನೀಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಮಾಸ್ಕ್, ಸ್ಯಾನಿಟೈಸರ್ ವಿತರಣೆ, ಸಾಮಾಜಿಕ ಜಾಗೃತಿ ಮೂಡಿಸುವುದು, ಲಸಿಕೆ ಸಂಬಂಧ, ಮನೆಮದ್ದು, ವ್ಯಾಯಾಮ ಜಾಗೃತಿ ಮೂಡಿಸಲಾಗುತ್ತಿದೆ. ಆರ್ಥಿಕ ಸುರಕ್ಷೆಗಾಗಿಯೂ ಕೆಲಸ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ಜನರನ್ನು ನಾವು ಕಳೆದುಕೊಂಡಿದ್ದೇವೆ. ಜನರಿಗೆ ನೆರವಾಗಲು ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಕುರಿತು (ಎರಡು ಲಕ್ಷ ವಿಮೆ), ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ರೈತ ಮೋರ್ಚಾವು ರಾಜ್ಯದಲ್ಲಿ ವಿವಿಧ ಮೋರ್ಚಾಗಳ ಸಹಯೋಗದಲ್ಲಿ 11 ಲಕ್ಷ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಿದೆ. ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ- ಜನ್ಮದಿನದ ನಡುವಿನ ಅವಧಿಯಲ್ಲಿ ಈ ಕಾರ್ಯ ನೆರವೇರಲಿದೆ ಎಂದರು. ಕೇಂದ್ರ ಸರ್ಕಾರವು ಡಿಎಪಿ ಗೊಬ್ಬರದ ದರ ಏರದಂತೆ ತಡೆಯಲು ಹೆಚ್ಚುವರಿ ಸಬ್ಸಿಡಿ ನೀಡಿದ್ದು, ಈ ಮೂಲಕ 1,200 ರೂಪಾಯಿ ದರದಲ್ಲಿ ಒಂದು ಬ್ಯಾಗ್ ಡಿಎಪಿ ಲಭಿಸುವಂತೆ ಮಾಡಿದೆ. ನ್ಯಾನೋ ಯೂರಿಯಾ ಬಿಡುಗಡೆ ಮಾಡಿದೆ. ಕಡಿಮೆ ಖರ್ಚಿನಲ್ಲಿ ಇದು ಲಭಿಸಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕೃಷಿ ಡಿಪ್ಲೊಮಾ, ಕೃಷಿ ಬಿಎಸ್ಸಿ, ಸಮಾನ ಪದವಿ ಕೋರ್ಸ್ ಗಳ ಪ್ರವೇಶದಲ್ಲಿ ಕೃಷಿಕರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಮೀಸಲು ಪ್ರಮಾಣವನ್ನು ಶೇ 40ರಿಂದ ಶೇ 50ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ರಾಜ್ಯ ಸರಕಾರ ನಿನ್ನೆ ನಿರ್ಧರಿಸಿದೆ. ಇದೊಂದು ಮಹತ್ವದ ಕ್ರಮವಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಕೃಷಿಕರ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಹೇಳಿದರು. ಇದೇ ವೇಳೆ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನೆ, ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *