ಹತ್ರಾಸ್ ಪ್ರಕರಣ – ಎಸ್‍ಪಿ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಮಾನತು

Public TV
3 Min Read

– ಅಮಾನತುಗೊಳಿಸಿ ಆದೇಶ ಹೊರಡಿಸಿದ ಯೋಗಿ ಸರ್ಕಾರ
– ಸುಳ್ಳು ಪತ್ತೆ, ಮಂಪರು ಪರೀಕ್ಷೆ ಆದೇಶ

ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆ, ವಿರೋಧ ಪಕ್ಷಗಳ ಆಕ್ರೋಶದ ಬಳಿಕ ಉತ್ತರ ಪ್ರದೇಶ ಸರ್ಕಾರ ಎಸ್‍ಪಿ, ಡಿಎಸ್‍ಪಿ, ಇನ್ಸ್ ಪೆಕ್ಟರ್ ಹಾಗೂ ಇತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಟ್ವೀಟ್ ಮಾಡಿದ ಕೆಲವೇ ಗಂಟೆಗಳ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನಿರ್ಧಾರ ಕೈಗೊಂಡಿದ್ದಾರೆ. ಎಸ್‍ಪಿ ವಿಕ್ರಾಂತ್ ವೀರ್, ಡಿಎಸ್‍ಪಿ ರಾಮ್ ಶಬ್ದ್, ಇನ್ಸ್‍ಪೆಕ್ಟರ್ ದಿನೇಶ್ ವರ್ಮಾ, ಸಬ್ ಇನ್‍ಸ್ಪೆಕ್ಟರ್ ಜಗ್ವೀದ್ ಸಿಂಗ್ ಹಾಗೂ ಹೆಡ್ ಕಾನ್‍ಸ್ಟೇಬಲ್ ಮಹೇಶ್ ಪಾಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಮ್ಲಿ ಎಸ್‍ಪಿ ವಿನೀತ್ ಜೈಸ್ವಾಲ್ ಅವರಿಗೆ ಹತ್ರಾಸ್ ಚಾರ್ಜ್ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಮಾನತು ಆದೇಶದ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ಮೇಲೆ ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟರ್‍ನ್ನು ಸಹ ಅಮಾನತುಗೊಳಿಸಬೇಕು ಎಂಬ ಒತ್ತಾಯ ಸಹ ಕೇಳಿ ಬರುತ್ತಿದೆ. ಆದರೆ ಸದ್ಯಕ್ಕೆ ಅವರನ್ನು ಅಮಾನತು ಮಾಡಲಾಗಿಲ್ಲ.

ಕೆಲವೇ ಗಂಟೆಗಳ ಮುಂಚೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ ಉತ್ತರ ಪ್ರದೇಶದ ತಾಯಂದಿರು ಹಾಗೂ ಸಹೋದರಿಯರ ಗೌರವಕ್ಕೆ ಧಕ್ಕೆ ತರುವವರನ್ನು ಬಿಡುವುದಿಲ್ಲ. ಅವರು ಸರ್ವ ನಾಶವಾಗುತ್ತಾರೆ, ಕಠೋರ ಶಿಕ್ಷೆ ವಿಧಿಸಲಾಗುವುದು. ಅಲ್ಲದೆ ಭವಿಷ್ಯದಲ್ಲಿ ಮಾದರಿಯಾಗವ ರೀತಿ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಏನಿದು ಪ್ರಕರಣ?
ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಎರಡು ವಾರಗಳ ಅಂದರೆ ಮಂಗಳವಾರ ದೆಹಲಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ 20 ವರ್ಷದ ಯುವತಿಯ ಅಂತ್ಯಸಂಸ್ಕಾರವನ್ನು ಕಳೆದ ರಾತ್ರಿ ಪೊಲೀಸರೇ ನೆರವೇರಿಸಿದ್ದರು. ಈ ವೇಳೆ ಮೃತ ಯುವತಿಯ ಕುಟುಂಬ ಮತ್ತು ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಲು ಬಿಡಿ ಎಂದು ಎಷ್ಟೇ ಕೂಗಾಡಿದರೂ ಅವರನ್ನು ಮನೆಯಲ್ಲೇ ಕೂಡಿಹಾಕಿ ಪೊಲೀಸರೇ ರಾತ್ರಿ 2.30ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ಈ ವೇಳೆ ಯುವತಿ ಕುಟುಂಬ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ತಮ್ಮ ಮಗಳ ಮುಖವನ್ನು ನೋಡಲು ಬಿಡದಿದ್ದರಿಂದ ಉದ್ರಿಕ್ತರಾದ ಕುಟುಂಬಸ್ಥರು, ಅಂಬುಲೆನ್ಸ್ ಮೇಲೆ ಮರದ ತುಂಡುಗಳನ್ನು ಎಸೆಯುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೂ ಪೊಲೀಸರು ಮಾತ್ರ ಕ್ಯಾರೇ ಎನ್ನದೇ ಮೃತದೇಹವನ್ನು ತೆಗೆದುಕೊಂಡು ಹೋಗಿ ತಾವೇ ಅಂತ್ಯಸಂಸ್ಕಾರ ಮಾಡಿದ್ದರು. ಇದರಿಂದ ಯುವತಿಯ ಕುಟುಂಬಸ್ಥರು ಅಸಹಾಯಕರಾಗಿ ಕಣ್ಣೀರಿಟ್ಟಿದ್ದರು.

ಘಟನೆ ಬಳಿಕ ವಿಡಿಯೋ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ, ಪ್ರತಿಭಟನೆಗಳು ಜೋರಾಗಿವೆ. ಅಲ್ಲದೆ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹತ್ರಾಸ್‍ಗೆ ತೆರಳಲು ಯತ್ನಿಸಿದ್ದರು. ಆದರೆ ಪೊಲೀಸರು ಅವರನ್ನು ತಡೆದು ಮರಳಿ ದೆಹಲಿಗೆ ಕಳುಹಿಸಿದ್ದರು. ಬಳಿಕ ಇಂದು ಸಹ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

Share This Article
Leave a Comment

Leave a Reply

Your email address will not be published. Required fields are marked *